ಆರು ಕಂಬದ ಮೇಲೆ ಮೂರು ದೇಗುಲವ ಕಂಡೆನಯ್ಯ.
ಮೂರು ದೇಗುಲದ ಮೇಲೆ ಒಂದು ಶಿಖರವ ಕಂಡೆನಯ್ಯ.
ಆ ಶಿಖರವನೊಂದು ವಸ್ತು ಒಳಗೊಂಡಿರ್ಪುದು ನೋಡಾ.
ಆ ವಸ್ತುವಿನ ಕುರುಹ ನೀವಾರಾದರೆ ಹೇಳಿರಯ್ಯ;
ನಾನೊಂದ ಅರಿಯೆನು.
ತಾನಾಗಿ ಕಾಣಬಲ್ಲವರಿಂಗೆ ಕಾಣಬಂದಿತ್ತಯ್ಯ.
ಕಾಣಲರಿಯದವರಿಂಗೆ ದೂರವಾಗಿತ್ತಯ್ಯ
ಝೇಂಕಾರ ನಿಜಲಿಂಗಪ್ರಭುವೆ.