Index   ವಚನ - 242    Search  
 
ಅನಂತಕೋಟಿಬ್ರಹ್ಮಾಂಡವ ನುಂಗಿಕೊಂಡಿರ್ಪುದಯ್ಯ ಒಂದು ಲಿಂಗ. ಆ ಲಿಂಗವೇ ಒಂದು ಮೂರಾಯಿತ್ತಯ್ಯ, ಮೂರೇ ಆರಾಯಿತ್ತಯ್ಯ, ಆರೇ ಮೂವತ್ತಾರಾಯಿತ್ತಯ್ಯ, ಮೂವತ್ತಾರೇ ಇನ್ನೂರಹದಿನಾರಾಯಿತ್ತಯ್ಯ, ಇನ್ನೂರಹದಿನಾರೇ ಎಪ್ಪತ್ತೆರಡುಸಾವಿರವಾಯಿತ್ತಯ್ಯ, ಎಪ್ಪತ್ತೆರಡುಸಾವಿರವೇ ಅರವತ್ತುಆರುಕೋಟಿಯಾಯಿತ್ತಯ್ಯ, ಅರವತ್ತುಆರು ಕೋಟಿ ಆದ ಸದಾಶಿವನು, ಒಳಹೊರಗೆ ಪರಿಪೂರ್ಣವಾಗಿಪ್ಪ ನೋಡಾ. ಅರವತ್ತು ಆರುಕೋಟಿ ಅರಿದು ಆಚರಿಸಿದಲ್ಲಿಗೆ ಎಪ್ಪತ್ತೆರಡುಸಾವಿರವಾದ. ಎಪ್ಪತ್ತೆರಡುಸಾವಿರವಾದಲ್ಲಿಗೆ ವ್ಯಾಪ್ತಿಯಾಗಿ ಲಿಂಗದ ಕಿರಣವಾದ. ವ್ಯಾಪ್ತಿಯಾಗಿ ಲಿಂಗಕಿರಣವಾದಲ್ಲಿಗೆ ಇನ್ನೂರಹದಿನಾರಾದ. ಇನ್ನೂರಹದಿನಾರಾದಲ್ಲಿಗೆ ಸುಜ್ಞಾನ ಉದಯವಾಯಿತ್ತು. ಸುಜ್ಞಾನ ಉದಯದೋರಿದಲ್ಲಿಗೆ ಮೂವತ್ತಾರಾದ. ಮೂವತ್ತಾರಾದಲ್ಲಿಗೆ ಮಹಾಜ್ಞಾನವು ಘಟಿಸಲು, ಮಹಾಜ್ಞಾನವು ಘಟಿಸಿದಲ್ಲಿಗೆ ಆರಾದ. ಆರಾದಲ್ಲಿಗೆ ಭಾವ ತಲೆದೋರಲು, ಭಾವ ತಲೆದೋರಿದಲ್ಲಿಗೆ ಮೂರಾದ. ಮೂರಾದಲ್ಲಿಗೆ ನಿಶ್ಚಿಂತನಾದ, ನಿಶ್ಚಿಂತನಾದಲ್ಲಿಗೆ ಒಂದೇ ಆದ, ಒಂದಾದಲ್ಲಿಗೆ ಅನಂತ ಕೋಟಿಬ್ರಹ್ಮಾಂಡವ ನುಂಗಿಕೊಂಡಿದ್ದೆಯಯ್ಯ ಝೇಂಕಾರ ನಿಜಲಿಂಗಪ್ರಭುವೆ.