ರವಿ ಶಶಿಗಳಿಲ್ಲದಂದು, ಕತ್ತಲೆ ಕಾಳಾಂಧಗಳಿಲ್ಲದಂದು,
ಜ್ಞಾನ ಮಹಾಜ್ಞಾನಂಗಳು ಇಲ್ಲದಂದು,
ಅತ್ತತ್ತಲೆ ತಾನೆ ತಂದೆಯಾಗಿದ್ದೆಯಯ್ಯ.
ತನಗೆ ಮಕ್ಕಳು ಬೇಕಾಗಿ ನೆನಹಂಗೈಯಲು.
ಓಂಕಾರವೆಂಬ ಪ್ರಣವ ಪುಟ್ಟಿತ್ತು ನೋಡಾ.
ಆ ಓಂಕಾರವೆಂಬ ಪ್ರಣವದಲ್ಲಿ
ಅಕಾರ ಉಕಾರ ಮಕಾರಂಗಳಾದವು ನೋಡಾ.
ಅಕಾರ ಉಕಾರ ಮಕಾರಂಗಳೊಡನೆ
ಷಡಕ್ಷರಂಗಳು ಆದವು ನೋಡಾ.
ಆ ಷಡಕ್ಷರಂಗಳೊಡನೆ ಷಟ್ಚಕ್ರಂಗಳಾದವು ನೋಡಾ.
ಆ ಷಟ್ಚಕ್ರಂಗಳೊಡನೆ ಷಡ್ವಿಧಮೂರ್ತಿಗಳಾದವು ನೋಡಾ.
ಆ ಷಡ್ವಿಧಮೂರ್ತಿಗಳೊಡನೆ ಷಡ್ವಿಧಲಿಂಗವಾದವು ನೋಡಾ.
ಆ ಷಡ್ವಿಧಲಿಂಗದೊಡನೆ ಷಡ್ವಿಧಶಕ್ತಿಯರಾದರು ನೋಡಾ.
ಆ ಷಡ್ವಿಧಶಕ್ತಿಯರೊಡನೆ ಷಡ್ವಿಧಭಕ್ತಿಯಾಯಿತು ನೋಡಾ.
ಆ ಷಡ್ವಿಧಭಕ್ತಿಯನರಿತು ನಾದಬಿಂದುಕಲೆಗಳ ಮೀರಿ
ಪರಕೆ ಪರವಾದ ಲಿಂಗವನಾಚರಿಸುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.