Index   ವಚನ - 392    Search  
 
ಆದಿಯ ಬೀಜ ಶಿವಸಂಸ್ಕಾರಿ ಅನಾದಿಶರಣನಯ್ಯ. ಆ ಶರಣನ ಅಂತರಂಗದಲ್ಲಿ ನಿರಾಳಘೋಷಲಿಂಗವಿಪ್ಪುದು ನೋಡಾ. ಆ ನಿರಾಳಘೋಷಲಿಂಗದೊಳಗೆ ಅನಂತಕೋಟಿ ಕಿರಣಂಗಳು ಒಳಹೊರಗೆ ಪರಿಪೂರ್ಣವಾಗಿಹುದು ನೋಡಾ. ಅಂತಪ್ಪ ಅನಾದಿ ಶರಣನ ಕರಸ್ಥಲಕ್ಕೆ ಇಷ್ಟಲಿಂಗವು ಕಾರುಣ್ಯವಾಗಿ ಬಂದಿತ್ತು ನೋಡಾ. ಬಂದ ಕಾರಣ ಮನಸ್ಥಲದ ಪ್ರಾಣಲಿಂಗಕ್ಕೆ ಅರುಹುದೋರಿತ್ತು ನೋಡಾ. ಆ ಮನಸ್ಥಲದ ಪ್ರಾಣಲಿಂಗಕ್ಕೆ ಅರುಹುದೋರಿದ ಕಾರಣ ಪರಸ್ಥಲದ ಭಾವಲಿಂಗವು ಬೆರಗಾಯಿತ್ತು ನೋಡಾ. ಆ ಪರಸ್ಥಲದ ಭಾವಲಿಂಗವು ಬೆರಗಾದ ಕಾರಣ ಅಗಮ್ಯಸ್ಥಲದ ನಿರಾಳಘೋಷಲಿಂಗವು ಘೋಷಿಸುತಿಪ್ಪುದು ನೋಡಾ. ಇದು ಕಾರಣ, ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳು ನಿರಾಳಘೋಷಲಿಂಗದಲ್ಲಿ ಅಡಗಿಪ್ಪವು ನೋಡಾ. ಇದು ಕಾರಣ, ಆ ನಿರಾಳಘೋಷಲಿಂಗದಲ್ಲಿ ನಿಃಪ್ರಿಯವಾದ ಶರಣರ ಪಾದದಂಘ್ರಿಯ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.