Index   ವಚನ - 760    Search  
 
ಅಂಗಲಿಂಗ ಸಮರಸವಾದಲ್ಲದೆ, ಸಂಗವ ಮಾಡನಯ್ಯ ನಿಮ್ಮ ಶರಣನು. ಶ್ರೋತ್ರಲಿಂಗ ಸಮರಸವಾದಲ್ಲದೆ, ಶಬ್ದಾದಿಗಳ ಕೇಳನಯ್ಯ ನಿಮ್ಮ ಶರಣನು. ತ್ವಕ್ಕುಲಿಂಗ ಸಮರಸವಾದಲ್ಲದೆ, ಸ್ಪರುಶನಾದಿಗಳ ಮಾಡನಯ್ಯ ನಿಮ್ಮ ಶರಣನು. ನೇತ್ರಲಿಂಗ ಸಮರಸವಾದಲ್ಲದೆ, ರೂಪಾದಿಗಳ ನೋಡನಯ್ಯ ನಿಮ್ಮ ಶರಣನು. ಜಿಹ್ವೆಲಿಂಗ ಸಮರಸವಾದಲ್ಲದೆ, ಷಡುರುಚಿಯ[ಅನುಭವಿಸ]ನಯ್ಯ ನಿಮ್ಮ ಶರಣನು. ಪ್ರಾಣಲಿಂಗ ಸಮರಸವಾದಲ್ಲದೆ, ಗಂಧವ [ವಾಸಿನ]ನಯ್ಯ ನಿಮ್ಮ ಶರಣನು. ಇದು ಕಾರಣ, ಇಂತಪ್ಪ ಭೇದವನರಿತು, ಮಹಾಲಿಂಗದ ಬೆಳಗಿನೊಳು ಕೂಡಿ ಪರಿಪೂರ್ಣತ್ವದಿಂದ ಪರಾಪರಂ ನಾಸ್ತಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.