Index   ವಚನ - 13    Search  
 
ಚತುರ್ವೇದನುಭಾವ ಜಂಗಮವೆಲ್ಲ ಬ್ರಹ್ಮನ ಸಂತತಿ. ಹದಿನೆಂಟು ಪುರಾಣದ ಅನುಭಾವ ಮಾಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ. ಮೂವತ್ತೆರಡು ದಿವ್ಯ ಆಗಮ[ದ ಅನುಭಾವ] ಮಾಡುವ ಜಂಗಮವೆಲ್ಲ ಈಶ್ವರನ ಸಂತತಿ. ಆರು ಶಾಸ್ತ್ರದನುಭಾವ ಮಾಡುವ ಜಂಗಮವೆಲ್ಲ ಸದಾಶಿವನ ಸಂತತಿ. ಇಂತೀ ಎಲ್ಲ ಶಬ್ದವನು ಮುಟ್ಟಿ ಲಿಂಗದನುಭಾವ ಮಾಡುವ ಜಂಗಮವೆಲ್ಲ ಘನನಿತ್ಯ ಕಾಣಾ, ಜಂಗಮಲಿಂಗಪ್ರಭುವೆ.