Index   ವಚನ - 62    Search  
 
ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ ಮಹಾಘನಲಿಂಗ ನಿಕ್ಷೇಪವಾಗಿದೆ! ಈ ದಿವ್ಯ ನಿಕ್ಷೇಪವ ಸಾಧಿಸುವಡೆ ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು. ಲಿಪಿಯಿಲ್ಲದೆ ತೆಗೆವಡಸದಳ. ಆ ಲಿಪಿಯ ವ್ರಯವ ಷಟ್‍ತತ್ವದ ಮೇಲೆ ನಿಶ್ಚಯಿಸಿ. ಆ ನಿಶ್ಚಯದೊಳಗೆ ಈ ನಿಕ್ಷೇಪದ ಕರ್ತೃವಿನ ಹೆಸರೋದಿತ್ತು. ತಿಳಿಯಲೋದುವನ್ನಬರ ಆತ ನಮ್ಮ ಹೆತ್ತಯ್ಯನೆಂಬ ಹೆಸರೋದಿತ್ತು. ಆ ಓದಿಕೆಯ ಕಡೆಯಕ್ಕರದೊಳಗೆ ಅಂಜನಸಿದ್ಧಿ ಹೇಳಿತ್ತು. ಅದಾವ ಪರಿಕ್ರಮದ ಅಂಜನವೆಂದಡೆ ಅದೆಮ್ಮ ಹೆತ್ತಯ್ಯ ಜಗದ್ವಿಲಾಸ ತದರ್ಥವಾಗಿ ಆ ತನ್ನ ಮೂಲಶಕ್ತಿ ಸಂಭೂತವಾದುದು. ಅಲ್ಲಿ ಹುಟ್ಟಿದ ದಿವ್ಯ ಚಿತ್ಕಳೆಯಿಂದೊಗೆದ ದಿವ್ಯಭಸಿತವೆಂದಿತ್ತು. ಆ ದಿವ್ಯ ಭಸಿತವೆಂಬ ದಿವ್ಯಾಂಜನವ ತಳೆದುಕೊಂಡು ಅತಿ ವಿಶ್ವಾಸದಿಂದ ನಾನೆನ್ನ ಹಣೆಯೆಂಬ ಕಣ್ಣಿಂಗೆಚ್ಚಿ ಸರ್ವಾಂಗವ ತೀವಲೊಡನೆ ಕರಸ್ಥಲದೊಳಗಣ ನಿಕ್ಷೇಪ ಕಣ್ದೆರವಾಯಿತ್ತು. ಆ ಕಣ್ದೆರವಾದ ನಿಕ್ಷೇಪವ ಮುಟ್ಟಹೋದಡೆ ಅಲ್ಲಿ ನಮ್ಮ ಹೆತ್ತಯ್ಯನ ಹೊಳಹ ಕಂಡು ತಳವೆಳಗಾದೆ ಕಾಣಾ! ರಾಮನಾಥ.