Index   ವಚನ - 1011    Search  
 
ಒಂದೆರಡಾದುದನಾರೂ ಅರಿಯರು: ಆ `ಒಂದು' ಒಂದೆ ಆಯಿತ್ತು, ತ್ರಿತತ್ತ್ವವಾಯಿತ್ತು, ವೇದಾತೀತವಾಯಿತ್ತು, ಭರಿತವಾಯಿತ್ತು, ಪ್ರಾದೇಶಿಕವಾಯಿತ್ತು, ಭಕ್ತಿಗೆ ಸಾಧ್ಯವಾಯಿತ್ತು. ಅದಕ್ಕೆ ಆಧಾರ ದೇಹವಾಯಿತ್ತು. ಅದು ಅಷ್ಟವಿಗ್ರಹ ಸ್ವರೂಪವಾಗಿರುತ್ತಿಪ್ಪುದು. ಮತ್ತಿರುತಿರ್ದ ಒಂದು ಮಾಯಾಶಕ್ತಿಯಂ ಕೂಡಿ, ಗುಣತ್ರಯಂಗಳಂ ಕೂಡಿ, ನಾನಾತ್ಮನೆನಿಸಿಕೊಂಡು, ವಿಷಯಾತ್ಮ ಇಂದ್ರಿಯಾತ್ಮ ಭೂತಾತ್ಮ ಜೀವಾತ್ಮ ಪರಮಾತ್ಮನೆನಿಸಿಕೊಂಡು, ಪ್ರಾಣಾದಿವಾಯುಗಳಂ ಕೂಡಿಕೊಂಡು ಜಡಪ್ರಕೃತಿಗಳಂ ಹೊತ್ತುಕೊಂಡು ಸಂಕಲ್ಪ-ವಿಕಲ್ಪವೆಂಬ ಉಭಯ ಕರ್ಮಂಗಳಂ ಕಲ್ಪಿಸಿ, ನಾನಾಯೋನಿ ಪ್ರಾಪ್ತವಾಗುತ್ತಿರ್ದು, ಲೋಕಾದಿಲೋಕಂಗಳೊಳು ತೊಳಲಿ ಬಳಲಿ, ತನ್ನ ಮೊದಲ ಕೂಡುವ ಪ್ರಕಾರಮಂ ಬಯಸಿ, ನಾನಾ ವಿಧದಿಂದ ಅರಸಿ ಹರಿವುತ್ತಿಪ್ಪರು ಅಖಿಳ ಜೀವಿಗಳೆಲ್ಲರು. ಇದ ಬೆರಸದೆ; ಬೆರಸಿದ ಸಂಗನಬಸವಣ್ಣನ ನೆನೆನೆನೆದು ಶರಣೆಂದು ಶುದ್ಧನಾದೆನು ಕಾಣಾ ಗುಹೇಶ್ವರಾ.