Index   ವಚನ - 225    Search  
 
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ, ಅಂಗ-ಪ್ರತ್ಯಂಗ-ಸ್ವರೂಪ ಸ್ವಭಾವಗಳೆಂತೆಂದಡೆ: ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ, ಮಹಾಘನವಾಗಿಹ ಪ್ರಣವವೆ ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ. ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಪುರ್ಬು. ಅಚಲಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ. ಸಹಜ ನಿರಾಲಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ನಾಸಿಕ ನೋಡಾ. ನಿರಾಲಂಬಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ. ನಿರಾಮಯಪ್ರಣವ ನಿರಾಮಯಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ. ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ. ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ. ನಾದ ಬಿಂದು ಕಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ್ಠಸಂಪುಟ ನೋಡಾ. ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ, ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ, ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ, ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ, ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ, ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ. ಕುಳವಿಲ್ಲದ ನಿರಾಕುಳಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕೊರಳು. ಅಪ್ರಮಾಣ ಅಗೋಚರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ. ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ, ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ. ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ. ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ. ನಿರುಪಮಪ್ರಣವ, ನಿರುಪಮಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾರ್ಶ್ವಂಗಳು. ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು. ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನಿನೆಲುವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ. ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು, ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು, ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು, ಅನೇಕಕೋಟಿ ಆದಿಪಾಶಂಗಳೆಂಬ ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು, ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್‍ಪದ, ಅನೇಕಕೋಟಿ ಅನಾದಿ ತ್ವಂಪದ, ಅನೇಕಕೋಟಿ ಅನಾದಿ ಅಸಿಪದಂಗಳೆಂಬ ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್‍ಪದ, ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು, ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ ವೇದಾಂತ ಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು, ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು, ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು, ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು, ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು, ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಆದಿದೇವರ್ಕಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು, ಅನೇಕಕೋಟಿ ಮಹಾಬ್ರಹ್ಮಾಂಡಂಗಳು, ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ನಡುವೇ ವ್ಯೋಮಾತೀತಪ್ರಣವವು. ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ ಚಿತ್ಕಲಾತೀತಪ್ರಣವ. ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ ಅನಾದಿಪ್ರಣವ ಆದಿಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ ಮೊದಲಾದ ಅನೇಕಕೋಟಿ ದೇವರ್ಕಳಿಗೂ ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ. ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ. ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ. ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ. ಓಂಕಾರಪ್ರಣವ ಮಹದೋಂಕಾರಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ. ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ ಪ್ರಣವದತ್ತತ್ತ ಸ್ಥಾನಂಗಳೇ ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ. ಆ ಓಂಕಾರಪ್ರಣವದ ಮಹದೋಂಕಾರಪ್ರಣವದ ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಾಂಗುಷ್ಠಾಂಗುಲಿಗಳು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಮಾತೇ ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ ಅತಿಮಹಾಜ್ಯೋತಿಪ್ರಣವ ನೋಡಾ. ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯಲ್ಲಿ ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ ಆ ನಿರಾಳಸ್ವಯಂಭುಲಿಂಗಂಗಳೇ ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ. ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ. ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.