Index   ವಚನ - 257    Search  
 
ನವಮಾಸಕ್ಕೆ ಶ್ರೋತ್ರಾದಿಗಳೈದು, ಶಬ್ದಾದಿಗಳೈದು, ಮಂಡಲಮೂರು, ಗುಣಮೂರು, ವ್ಯಾಧಿಮೂರು, ಈಷಣಮೂರು, ನಾಡಿಹತ್ತು, ವಾಯುಹದಿನಾಲ್ಕು, ಕ್ಲೇಷಂಗಳೈದು, ಧಾತುಗಳೇಳು, ಮದವೆಂಟು, ಸುಖದುಃಖಂಗಳೆರಡು, ಎಪ್ಪತ್ತೆರಡುಸಾವಿರ ನಾಡಿಗಳು, ಎಂಬತ್ತೆಂಟುಕೋಟಿ ರೋಮದ್ವಾರಂಗಳು, ಎಂಬತ್ನಾಲ್ಕುನೂರುಸಾವಿರ ಸಂದುಗಳು, ಇಪ್ಪತ್ತೊಂದುಸಾವಿರದಾರುನೂರು ಶ್ವಾಸಂಗಳು, ಮೂವತ್ತೆರಡು ಲಕ್ಷಣಂಗಳು, ಐವತ್ತಾರಕ್ಷರಂಗಳು, ಅರುವತ್ನಾಲ್ಕು ಕಲೆ, ಜ್ಞಾನಂಗಳು ಕೂಡಿ ಸುಜ್ಞಾನಸಂಪನ್ನನಾಗಿ ಪೂರ್ವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರ ಜನ್ಮದಲ್ಲಿ ಬಂದ ಜನ್ಮವ ವಿವೇಕಿಸುತ್ತಿಹುದು ನೋಡಾ. ಅದೆಂತೆಂದಡೆ: ಮಾನವಜನ್ಮ ಒಂಬತ್ತುಸಾವಿರ ಜನ್ಮ. ಉರುವ ಜೀವಜನ್ಮ ಹನ್ನೊಂದುಸಾವಿರಜನ್ಮ. ಜಲಚರ ಜೀವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರಜನ್ಮದಲ್ಲಿ ಹತ್ತುಸಾವಿರ ಜನ್ಮ. ಹಾರುವ ಪಕ್ಷಿಗಳ ಜೀವಜನ್ಮದಲ್ಲಿ ಹತ್ತುಸಾವಿರಜನ್ಮ. ಚತುಷ್ಪಾದಜೀವರಾಶಿಗಳ ಜನ್ಮದಲ್ಲಿ ಹತ್ತುಸಾವಿರಜನ್ಮ. ದೈತ್ಯ ಜೀವಜನ್ಮದಲ್ಲಿ ಹದಿನಾರುಸಾವಿರಜನ್ಮ. ಸ್ಥಾವರಂಗಳ ಜನ್ಮದಲ್ಲಿ ಹದಿನೆಂಟುಸಾವಿರಜನ್ಮ. ಇಂತು ಎಂಬತ್ನಾಲ್ಕುನೂರುಜನ್ಮ ಅಂಡಜ ಸ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ಯೋನಿಯಲ್ಲಿ ಜನಿಸಿದನು. ಇನ್ನು ಹುಟ್ಟಿದಾಕ್ಷಣದಲ್ಲಿಯೆ ಮರಣ, ಮರಣದಾಕ್ಷಣದಲ್ಲಿಯೇ ಜನನವೆಂದರಿದು ಸ್ಮರಿಸುತ್ತಿಹುದು ನೋಡಾ. ಇದಕ್ಕೆ ಈಶ್ವರ ಉವಾಚ: ಮಾಸೇಕಂ ನವಮೇ ಪ್ರಾಪ್ತೇ ಗರ್ಭೇತ ತತ್‍ಸ್ಮರತಿ ಸ್ವಯಂ | ಮೃತಸ್ಯಾಹಂ ಪುನರ್ಜಾತಃ ಜಾತಸ್ಯಾಹಂ ಮೃತಃ ಪುನಃ | ನಾನಾಯೋನಿಸಹಸ್ರೇಷು ಮಯಾ ದೃಷ್ಟಮನೇಕಶಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.