ವಚನ - 1020     
 
ಓಂ' ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ. ಪುರಾಣವನೋದುವ ಪುಂಡರಿಗೆ ಸಾಧ್ಯವಾಗದು ವಿಭೂತಿ. ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ. ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ. ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು, ಅಗ್ಛಣಿಯ ನೀಡಿ ಗುಣಮರ್ದನೆಯ ಮಾಡಿ ಲಿಂಗ ಉಚ್ಛಿಷ್ಠನಂಗೈದು, ಲಿಂಗ ಸಮರ್ಪಣಂಗೈದು, ಷಡಕ್ಷರಿಯ ಸ್ಮರೆಣೆಯಂಗೈದು, ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು ಹಸ್ತವ ಪ್ರಕ್ಷಾಲಿಸುವವ ಲಿಂಗದ್ರೋಹಿ ಜಂಗಮದ್ರೋಹಿ. ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ ಪಾತಕರ ಮುಖವ ನೋಡಲಾಗದು. ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು. ಸಾಕ್ಷಿ: ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ ಶ್ರಿವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ ದೇವಲೋಕ ಮರ್ತ್ಯಲೋಕಕ್ಕೆ ಸಲ್ಲದೆಂದುದಾಗಿ ನಿಮ್ಮಾಣೆ ನಿಮ್ಮ ಪ್ರಮಥರಾಣೆ, ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ.