ನಿರಂಜನ ಪ್ರಣವದ ನೆನಹುಮಾತ್ರದಿಂದ
ಅವಾಚ್ಯ ಪ್ರಣವದುತ್ಪತ್ಯವಾಯಿತ್ತು.
ಇನ್ನು ಅವಾಚ್ಯ ಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ:
ಸತ್ಯಂ ಜ್ಞಾನಮನಂತಂ ಬ್ರಹ್ಮ ಏಕಮೇವ ನ ದ್ವಿತೀಯಂ ಬ್ರಹ್ಮಂ''
ಎಂಬ ಪರಬ್ರಹ್ಮವಿಲ್ಲದಂದು,
ಏಕಏವೋ ರುದ್ರೋ ಮಹೇಶ್ವರಃ'' ಎಂಬ ಮಹೇಶ್ವರತತ್ತ್ವವಿಲ್ಲದಂದು,
ವಿಶ್ವರೂಪರುದ್ರ ವಿಶ್ವಾಧಿಕಮಹಾರುದ್ರರಿಲ್ಲದಂದು,
ಕೋಟಿ ಶತಕೋಟಿ ಸಾವಿರ ಜಡೆಮುಡಿ ಗಂಗೆ ಗೌರಿಯರಿಲ್ಲದಂದು,
ಕೋಟಾನುಕೋಟಿ ಕಾಲರುದ್ರರಿಲ್ಲದಂದು,
ಅಸಂಖ್ಯಾತ ಪ್ರಳಯ ಕಾಲರುದ್ರರಿಲ್ಲದಂದು,
ಅವಾಚ್ಯಪ್ರಣವವಾಗಿದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ.