ಅಲ್ಲಿಂದ ಮೇಲೆ ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ,
ಅಗ್ನಿಯೆಂಬ ಮಹಾಭೂತ.
ಆ ಚಕ್ರ ತ್ರಿಕೋಣಾಕಾರ, ದಶದಳಪದ್ಮ.
ಆ ಪದ್ಮ ಕೃಷ್ಣವರ್ಣ, ಅಲ್ಲಿಯ ಅಕ್ಷರ ಡಢಣ ತಥದಧನ ಪಫ
ಎಂಬ ದಶಾಕ್ಷರ ನ್ಯಾಸವಾಗಿಹುದು.
ಅಲ್ಲಿ ರಕ್ತವರ್ಣವಾಗಿಹ ಅಘೋರಮುಖವನುಳ್ಳ ಶಿವಲಿಂಗ;
ಆ ಲಿಂಗಕ್ಕೆ ವಿದ್ಯೆ ಕಲೆ, ಅಲ್ಲಿ ಮೂರ್ತಿಸಾದಾಖ್ಯ.
ಅಲ್ಲಿಯ ದಿಕ್ಕು ದಕ್ಷಿಣದಿಕ್ಕು, ಅಲ್ಲಿಯ ನಾದ ಘಂಟಾನಾದ.
ಲಾಕಿನಿಯೆಂಬ ಪರಿಯಾಯ ನಾಮವನುಳ್ಳ ಇಚ್ಛಾಶಕ್ತಿ
ಆ ಲಿಂಗದ ನೇತ್ರವೆಂಬ ಮುಖಕ್ಕೆ ನಿರಹಂಕಾರವೆಂಬ ಹಸ್ತದಿಂದ
ಅವಧಾನಭಕ್ತಿಯಿಂದ ರೂಪುದ್ರವ್ಯವನು
ಸಾಮವೇದವನುಚ್ಚರಿಸುತ್ತ ಅರ್ಪಿಸುವಳು.
ರುದ್ರ ಪೂಜಾರಿ, ಅಲ್ಲಿ ಶರೀರವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಶಿಕಾರವೆಂಬ ಬೀಜಾಕ್ಷರ.
ಅದು ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿಹುದಾಗಿ,
ಆ ಈ ಊ ಏ ಓ ಶಿಂ ಎಂಬ ಬ್ರಹ್ಮನಾದ ಮಂತ್ರಮೂರ್ತಿಪ್ರಣವದ
ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ
ನಮಸ್ಕಾರವು ನೋಡಾ.
ಇದಕ್ಕೆ ಈಶ್ವರೋsವಾಚ:
ಮಣಿಪೂರೇರ್ನಾಭಿಮಧ್ಯೇ ಭೂತಂ ತೇಜಃ ತ್ರಿಕೋಣಯೋಃ |
ಪದ್ಮಂ ದಶದಳಂ ಚೈವ ಅಕ್ಷರಂ ಚ ದಶಂ ಸ್ಮೃತಂ |
ವರ್ಣಾನಾಂ ಕೃಷ್ಣವರ್ಣಂತು ರುದ್ರೇ ದೇವಸ್ಯ ಲಾಕಿನಿ |
ಬೀಜಾಕ್ಷರಂ ಶಿಕಾರಂ ಚ ಘಂಟಾನಾದಂ ತಥೈವಚ |
ಶಿವಲಿಂಗಂ ಸ್ಥಿತಂ ಚೈವಂ ತ್ರಯೋಶ್ಚಕ್ರಮಿತಿ ಸ್ಮೃತಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.