Index   ವಚನ - 591    Search  
 
'ಏಕೋ ರುದ್ರಮಹೇಶ್ವರಾ' ಎಂಬ ಮಹೇಶ್ವರತತ್ವ ತಾನಿರ್ದಲ್ಲಿ, ವಿಶ್ವರೂಪರುದ್ರ ವಿಶ್ವಾಧಿಕಮಹಾರುದ್ರರು ತಾನಿರ್ದಲ್ಲಿ, ಕೋಟಿ ಶತಕೋಟಿ ಸಾವಿರಜಡೆಮುಡಿ ಗಂಗೆ ಗೌರಿಯರು ತಾನಿರ್ದಲ್ಲಿ, ಕೋಟ್ಯಾನುಕೋಟಿ ಕಾಲರುದ್ರರು ತಾನಿರ್ದಲ್ಲಿ, ಅಸಂಖ್ಯಾತ ಪ್ರಳಯಕಾಲರುದ್ರರು ತಾನಿರ್ದಲ್ಲಿ, ಶತಕೋಟಿ ಸಾವಿರ ಬ್ರಹ್ಮಕಪಾಲ ವಿಷ್ಣುಕಂಕಾಳ ದಂಡವ ಧರಿಸಿದ ಕಾಲಭೈರವರು ತಾನಿರ್ದಲ್ಲಿ. ತನ್ನಿಂದಧಿಕವಾದ ವಸ್ತುವೊಂದಿಲ್ಲವಾಗಿ ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣವಾಗಿಹ ಪರಶಿವತತ್ವ ನೋಡಾ ಅಪ್ರಮಾಣಕೂಡಲಸಂಗಮದೇವಾ.