Index   ವಚನ - 593    Search  
 
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಿರ್ದಲ್ಲಿ. ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇದ್ರಿಯಂಗಳು ತಾನಿರ್ದಲ್ಲಿ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚೇಂದ್ರಿಯವಿಷಯಂಗಳು ತಾನಿರ್ದಲ್ಲಿ. ವಚನ ಗಮನ ಆದಾನ ವಿಸರ್ಜನ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರಯಂಗಳು ತಾನಿರ್ದಲ್ಲಿ. ಮನ ಬುದ್ಧಿ ಚಿತ್ತ ಅಹಂಕಾರ ಜೀವನೆಂಬ ಜೀವಪಂಚಕಂಗಳು ತಾನಿರ್ದಲ್ಲಿ. ಇವೆಲ್ಲ ತನ್ನಲ್ಲಿ ಉತ್ಪತ್ಯ ಸ್ಥಿತಿ ಲಯವಾಗಿ ಮತ್ತಂ ತನ್ನಾಧೀನದಲ್ಲಿ ಆಡುತ್ತಿಹುದಲ್ಲದೆ ಸ್ವತಂತ್ರ ಪರಬ್ರಹ್ಮವೆ ತಾನೆಂದರಿದ ಮಹಾಶರಣನು ಅದರಾಧೀನದಲ್ಲಿ ತಾನಾಡನು ನೋಡಾ, ಅಪ್ರಮಾಣಕೂಡಲಸಂಗಮದೇವಾ.