ಶಿವತತ್ತ್ವದ ಹೃದಯದ ಮೇಲೆ ನಿರಾಳ ಆಜ್ಞಾಚಕ್ರ.
ಅಲ್ಲಿಯ ಪದ್ಮ ಅನೇಕ ಕೋಟಿದಳಪದ್ಮ.
ಆ ಪದ್ಮದ ವರ್ಣ ಅಂಥಾದಿಂಥಾದೆಂದು
ಉಪಮೆ ಇಲ್ಲದ ಉಪಮಾತೀತವಾಗಿಹುದು.
ಅಲ್ಲಿಯ ಅಕ್ಷರ ಅನೇಕ ಕೋಟಿ ಅಕ್ಷರ;
ಆ ಅಕ್ಷರ ಸರ್ವಾತೀತವಾಗಿಹುದು.
ಅಲ್ಲಿಯ ಶಕ್ತಿ ನಿರಾಳಪ್ರಣವವೆಂಬ ಮಹಾಶಕ್ತಿ.
ನಿರಾಳಾತೀತವೆಂಬ ಮಹಾಘನಲಿಂಗವೆ ಅಧಿದೇವತೆ.
ಅಲ್ಲಿಯ ನಾದ ಪರಮಾನಂದವೆಂಬ ಮಹಾನಾದ.
ಅಲ್ಲಿ ಬೀಜಾಕ್ಷರ ಕಲಾಪ್ರಣವ ನೋಡಾ
ಅಪ್ರಮಾಣಕೂಡಲಸಂಗಮದೇವಾ.