ಇನ್ನು ನಿರಾಳವಸ್ಥೆಯ ದರ್ಶನವದೆಂತೆಂದಡೆ:
ನಿರಾಳಮಯವನರಿದು ಆ ನಿರಾಳಮಯದೊಳು
ಪೂರ್ಣಬೋಧವಾಗಿ ನಿಂದುದೇ ನಿರಾಳಜಾಗ್ರ.
ಮುಂದೆ ಹೇಳಿದ ನಿರಾಳಮಯದೊಳು ವಿಕಾರವಳಿದು
ನಿರ್ವಿಕಾರವಾಗಿ ನಿಂದುದೆ ನಿರಾಳಸ್ವಪ್ನ.
ಮುಂದೆ ಹೇಳಿದ ನಿರಾಳಬೋಧದಲ್ಲಿ ಸಂತೋಷವನಳಿದು
ನಿಷ್ಪತ್ತಿಯಾಗಿ ನಿಂದುದೆ ನಿರಾಳಸುಷುಪ್ತಿ.
ಮುಂದೆ ಹೇಳಿದ ನಿರಾಳಬೋಧವ ಬಿಟ್ಟು
ಮೇಲಾದ ನಿರಾಳಾನಂದಕ್ಕೆ ಮೊದಲು ನಿರಾಳತೂರ್ಯ.
ಮುಂದೆ ಹೇಳಿದ ನಿರಾಳಾನಂದವನು ಸುಟ್ಟ ಠಾವು ನಿರಾಳವ್ಯೋಮ.
ನಿರಾಳವ್ಯೋಮವ ಮೆಟ್ಟಿ ಮೇಲಾದುದೇ ನಿರಾಳವ್ಯೋಮಾತೀತವೆಂದು
ಅಸಿಪದಾತೀತಾಗಮದಲ್ಲಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.