Index   ವಚನ - 691    Search  
 
ಶ್ರೋತ್ರದ್ವಾರಂಗಳೆರಡು ದ್ವಯದಳ ನೇತ್ರದ್ವಾರಂಗಳೆರಡು ದ್ವಯದಳ ಘ್ರಾಣಂಗಳೆರಡು ದ್ವಯದಳ ಜಿಹ್ವೆ ಅಮಳೋಕ್ಯವೆಂಬ ದ್ವಯದ್ವಾರಂಗಳೆರಡು ದ್ವಯದಳ ನೋಡಾ. ಇಂತೀ ಮುಖಕಮಲದ ಅಷ್ಟದಳಂಗಳೆ ಆ ಅಷ್ಟದಳಕಮಲ ನೋಡಾ. ಅಷ್ಟದಳಕಮಲವ ಮುಟ್ಟದಿಹ ಚತುರ್ದಳಪದ್ಮದ ಭೇದವದೆಂತೆಂದಡೆ: ಜೀವಹಂಸನ ಅಕ್ಷರದ್ವಯಗಳೆರಡು. ದ್ವಿದಳಪದ್ಮ ಪರಮಹಂಸನ ಅಕ್ಷರದ್ವಯಗಳೆರಡು ದ್ವಿದಳಪದ್ಮ ನೋಡಾ. ಜೀವಹಂಸನ ಅಕ್ಷರದ್ವಯವು ಪರಮಹಂಸನ ಅಕ್ಷರದ್ವಯವು ಚತುರ್ದಳಪದ್ಮ ನೋಡಾ. ಆ ಚತುರ್ದಳಪದ್ಮದ ಮಧ್ಯದಲ್ಲಿಹ ಕರ್ಣಿಕಾವಾಸದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹ ನಿರಾಳಶಂಭುಲಿಂಗವಿಹುದು. ಅದೇ ಮಧ್ಯ ನೋಡಾ. ಈ ಅಷ್ಟದಳಕಮಲ ಚೌಕಮಧ್ಯದ ಭೇದವ ಶಿವಯೋಗಿ ಲಿಂಗಾನುಭಾವಿ ಬಲ್ಲನಲ್ಲದೆ ಲೋಕದ ಜಡರುಗಳೆತ್ತ ಬಲ್ಲರು ಹೇಳಾ ಅಪ್ರಮಾಣಕೂಡಲಸಂಗಮದೇವಾ.