Index   ವಚನ - 787    Search  
 
ಮಂತ್ರ ಹನ್ನೊಂದು, ಪದ ತೊಂಬತ್ತುನಾಲ್ಕನರಿದು ಮೇಲಾಗಿ ಮನ ಮಹಾಘನದಲ್ಲಿ ನಿಂದಡೆ, ಆಚಾರ್ಯನೆಂದುದು ನೋಡಾ ಶ್ರುತಿಗಳು. ವರ್ಣ ಐವತ್ತೆರಡು, ಭುವನ ಇನ್ನೂರ ಇಪ್ಪತ್ತುನಾಲ್ಕವನರಿದು, ಮೇಲಾಗಿ ಮನ ಮಹಾಘನದಲ್ಲಿ ನಿಂದರೆ ಆಚಾರ್ಯನೆಂದುದು ನೋಡಾ ಶ್ರುತಿಗಳು. ಮೂವತ್ತಾರು ತತ್ವವನರಿದು, ಷಟ್‌ಕಲೆಗಳ ತಿಳಿದು ಮೇಲಾಗಿ ಮನ ಮಹಾಘನದಲ್ಲಿ ನಿಂದಡೆ ಆಚಾರ್ಯನೆಂದುದು ನೋಡಾ ಶ್ರುತಿಗಳು. ಮೂವತ್ತೆಂಟು ಕಲೆಗಳು, ಅರುವತ್ತುನಾಲ್ಕು ಕಲೆ ಜ್ಞಾನವನರಿದು ಮೇಲಾಗಿ ಮನ ಮಹಾಘನದಲ್ಲಿ ನಿಂದರೆ ಅವರ ವೇದಂಗಳು ಜಗದಾರಾಧ್ಯರೆಂದು ನಮೋ ನಮೋ ಎಂದುದು ನೋಡಾ ಅಪ್ರಮಾಣಕೂಡಲಸಂಗಮದೇವಾ.