Index   ವಚನ - 820    Search  
 
ಷಟ್ಸ್ಥಲಬ್ರಹ್ಮ ಷಟ್ಸ್ಥಲಬ್ರಹ್ಮವೆಂಬರು. ಷಟ್ಸ್ಥಲಬ್ರಹ್ಮದ ಭೇದವನಾರು ಬಲ್ಲರು? ಷಟ್ಸ್ಥಲಬ್ರಹ್ಮದ ಭೇದವನಾರೂ ಅರಿಯರು. ಷಟ್ಸ್ಥಲಬ್ರಹ್ಮದ ಭೇದವನರಿದಡೆ ಅರಿಯದಂತಿರಬೇಕು. ಷಟ್ಸ್ಥಲಬ್ರಹ್ಮದ ಭೇದವನರಿದೆವೆಂಬರು; ಅರಿದ ಪರಿಯೆಂತೊ? ಷಟ್ಸ್ಥಲಬ್ರಹ್ಮ `ನಿಃಶ್ಯಬ್ದಬ್ರಹ್ಮಮುಚ್ಯತೇ' ಎಂದು ಶ್ರುತಿಗಳು ಸಾರುತ್ತಿಹುದು. ಷಟ್ಸ್ಥಲಬ್ರಹ್ಮದ ಭೇದವು ನಿಶ್ಶಬ್ದಬ್ರಹ್ಮಗಲ್ಲದೆ ಅರಿಯಬಾರದು. ಅರಿದಡೆ ಅರಿಯದಂತಿರಬೇಕು; ಅರಿದಡೆ ಅರಿವುದು. ಜಂಗಮನೆ ಲಿಂಗವೆಂದರಿವುದು; ಜಂಗಮಪಾದೋದಕ ಪ್ರಸಾದವನು ಲಿಂಗಕ್ಕೆ ಕೊಟ್ಟು ಕೊಳ್ಳಬಹುದು. ಆ ಲಿಂಗಪ್ರಸಾದ ತಾ ಕೊಳ್ಳಬಹುದು. ಆ ಲಿಂಗದೊಡನೆ ಸಹಭೋಜನ ಮಾಡಬಹುದು. ಇಂತೀ ಭೇದವನರಿಯದೆ ಉದ್ದಂಡವೃತ್ತಿಯಲ್ಲಿ ಕೊಂಡನಾದಡೆ ನಾಯಕನರಕ ತಪ್ಪದು ನೋಡಾ ಅಪ್ರಮಾಣಕೂಡಲಸಂಗಮದೇವಾ.