Index   ವಚನ - 44    Search  
 
ಆ ಗುರುಶಿಷ್ಯರೆರಡು ಒಂದಾಗಿ ತಾನೇ ತಾನಾದ ವಿನೋದವೇನೆಂಬೆ? ಮಹಾಂತ ಮಹಾಂತ ನೀನೆಂದರೆ ನೀನು ಇಂದಿನ ಮಹಾಂತನೇ ಅಲ್ಲಾ, ಅಂದಿನ ಮಹಂತ ನೀನು. ನೀನು ನಿರುಪಮ, ನಿರಾಳ, ನಿಷ್ಕಳ, ನಿರ್ಬೈಲು, ಮಹಾಬಯಲಾದ ಅಂದಿನ ಮಹಾಂತ ನೀನಲ್ಲವೆ? ಅದು ನೀ ಹ್ಯಾಂಗ ಬಲ್ಲೆಯೆಂದರೆ: ನೀನು ನನಗೆ ತತ್ವೋಪದೇಶ ಹೇಳಿದಾತನೇ? ಅಲ್ಲ. ಅಷ್ಟಾಂಗಯೋಗಂಗಳ ಹೇಳಿದಾತನೇ? ಅಲ್ಲ. ಮುದ್ರೆಸಾಧನವ ಹೇಳಿದಾತನೇ? ಅಲ್ಲ. ಹಠಯೋಗ ಲಯಯೋಗ ಲಂಬಿಕಾಯೋಗ ತಪಜಪ ಅದ್ವೈತಾದಿ ನಿತ್ಯನೇಮ ಪುಣ್ಯ ಸತ್ಕರ್ಮ ಮೊದಲಾದ ಇವು ಏನಾದರೂ ಎನಗೆ ಹೇಳಿದಾತನೇ? ಅಲ್ಲ. ಇವು ಏನು ಹೇಳಲೊಲ್ಲದೆ ನನಗೊಂದು ಹೇಳಿದಿರಿ. ಅದ ಏನು ಹೇಳಿದಿರಿ ಅಂದರೆ, ನಿನ್ನ ನೀ ತಿಳಿದು ಹಾಡೆಂದು ಹೇಳಿದಿರಿ. ನೀನು ಹೇಳಿದುದಕ್ಕೆ ನಾನು ನನ್ನ ಒಬ್ಬುಳಿಯ ಮಾಡಿ ಏಕಚಿತ್ತಾಗಿ ಹೊರ ಆಸೆ ಬಿಟ್ಟು ಒಳನೋಟವಿಟ್ಟು ಹಸಿವೆ ತೃಷೆಗಳಂ ಸುಟ್ಟು ನನ್ನನ್ನೇ ನಾ ಕೆಟ್ಟು ರತಿ ನಿನ್ನೊಳಗಿಟ್ಟು ಆತ್ಮಜ್ಞಾನ ಅಳವಟ್ಟು, ಅಹಂಬ್ರಹ್ಮವಂ ಬಿಟ್ಟು, ನೀ ಒಂದು ಮಾಡೆಂದರೆ ನಾ ಒಂಬತ್ತು ಮಾಡಿ ಹುಡುಕಲು, ಅಲ್ಲಿ ನಿನ್ನ ಬಲ್ಲಾದೆ, ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ನನ್ನ ನಿನ್ನ ಬಲ್ಲಲ್ಲಿ ಸರ್ವವೂ ಬಲ್ಲಾದೆ. ಅದು ಹ್ಯಾಂಗ ಬಲ್ಲಿ ಅಂದರೆ, ಮಾತಿಲೆ ಬಲ್ಲಲ್ಲಿ ನಿನ್ನ ವಾರ್ತಿ ಕೇಳಿ ಬಲ್ಲೆ, ನಿನ್ನ ಸನ್ನಿಧಿಗೆ ಹೋಗಿ ಬಲ್ಲೆ, ನಿನ್ನ ಕಂಡು ಬಲ್ಲೆ, ನಿನ್ನ ಕೂಡಿ ಬಲ್ಲೆ, ನಿನ್ನ ಸದ್ವಾಸನೆಗೊಂಡು ಬಲ್ಲೆ, ನಿನ್ನ ಸ್ನೇಹವ ಮಾಡಿ ಬಲ್ಲೆ, ನಿನ್ನ ಕೂಡುಂಡು ಬಲ್ಲೆ, ನಿನ್ನ ಸಮರಸಗೂಡಿ ಬಲ್ಲೆ, ನಿನ್ನ ಕೂಡಿದ ಪರಮಸುಖ ಪರಮ ಉಪಕಾರಕ್ಕೆ ಹೇಳಬಲ್ಲೆ, ವಿಸ್ತಾರವಾಗಿ ನಿನ್ನ ಹಾಡಿ ಬಲ್ಲೆ, ಒಂದೆ ಮಾಡಬಲ್ಲಲ್ಲಿ ಒಂಬತ್ತ ಮಾಡಬಲ್ಲೆ, ಈ ಒಂಬತ್ತುಮಾಡಿ ಬಲ್ಲಲ್ಲಿ ನಾ ಮೊದಲಾದ ಸರ್ವವು ನೀನೆಂಬುದು ಬಲ್ಲೆ. ಇನ್ನು ಎನ್ನ ಪ್ರಾಣ, ಮನ, ದೇಹ, ಭಾವ, ಅರವು, ಮನವು ನನ್ನ ಸರ್ವವು ನೀನಾದ ಮ್ಯಾಲೆ ನನಗೇನುಂಟು? ಮರ್ತ್ಯಲೋಕದ ಮಹಾಗಣಂಗಳು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಎನಗೊಂದು ಹೆಸರಿಟ್ಟಿದ್ದರು. ಅದು ಹೆಸರು ನಿನಗೆ ಆಯಿತು. ಅದೇನು ಹೆಸರೆಂದರೆ? ಸರ್ವವು ನೀನಾದಮ್ಯಾಲೆ, ಸತ್ಕರ್ಮ ದುಷ್ಕರ್ಮ ಎರಡು ನೀನೇ ಆದಿ. ನಾನು ಇನ್ನೇನು ಮಾಡಲಿ ಎಂದು ಆವ ಕರ್ಮವಿಲ್ಲದೆ ಸುಮ್ಮನೆ ಇರುತಿರಲು, ಅದ ಕಂಡು ಹೆಸರಿಟ್ಟಿದ್ದರು. ಈತ ಸತ್ಕರ್ಮಿಯೆಂಬುವೆ ಸತ್ಕರ್ಮಿ ಅಲ್ಲಾ, ಈತಗೆ ನಾವು ದುಷ್ಕರ್ಮಿಯೆಂಬುವೆ ದುಷ್ಕರ್ಮಿ ಅಲ್ಲಾ, ಪಾಪಿಯೆಂಬುವೆ ಪಾಪಿ ಅಲ್ಲಾ, ಪುಣ್ಯನೆಂಬುವೆ ಪುಣ್ಯನಲ್ಲಾ, ಆಸೆ ಅಲ್ಲಾ ನಿರಾಸೆ ಅಲ್ಲಾ, ಅಜ್ಞಾನಿ ಅಲ್ಲಾ ಸುಜ್ಞಾನಿ ಅಲ್ಲಾ, ಕಾಮಿ ಅಲ್ಲಾ ನಿಷ್ಕಾಮಿ ಅಲ್ಲಾ, ಕ್ರೋಧಿ ಅಲ್ಲಾ ನಿಷ್ಕ್ರೋಧಿ ಅಲ್ಲಾ, ಲೋಭಿ ಅಲ್ಲಾ ನಿರ್ಲೋಭಿ ಅಲ್ಲಾ, ಮೋಹಿ ಅಲ್ಲಾ ನಿರ್ಮೋಹಿ ಅಲ್ಲಾ, ಅಹಂಕಾರಿ ಅಲ್ಲಾ ನಿರಹಂಕಾರಿ ಅಲ್ಲಾ, ಮತ್ಸರಿ ಅಲ್ಲಾ ಮತ್ಸರರಹಿತನೇ ಅಲ್ಲಾ. ಯೋಗಿಯೇ ಅಲ್ಲಾ ಭೋಗಿಯೆ ಅಲ್ಲಾ. ತ್ಯಾಗಿಯೇ ಅಲ್ಲಾ ರಾಗಿಯೇ ಅಲ್ಲಾ, ಸುಖಿಯೇ ಅಲ್ಲಾ ದುಃಖಿಯೆ ಅಲ್ಲಾ, ಕ್ರಿಯಯುಕ್ತನೇ ಅಲ್ಲಾ ಕ್ರಿಯಾಬಾಹ್ಯನೇ ಅಲ್ಲಾ, ಭವಿಯೇ ಅಲ್ಲಾ ಭಕ್ತನೇ ಅಲ್ಲಾ, ಶಿವನೇ ಅಲ್ಲಾ ಜೀವನೇ ಅಲ್ಲಾ. ಅರುವೇ ಅಲ್ಲಾ ಮರವೆಯೇ ಅಲ್ಲಾ, ಸತ್ತವನೇ ಅಲ್ಲಾ ಬದುಕಿದವನೇ ಅಲ್ಲಾ, ಊರವನೇ ಅಲ್ಲಾ ಅಡವಿಯವನೇ ಅಲ್ಲಾ, ಗುರುವೇ ಅಲ್ಲಾ ಶಿಷ್ಯನೇ ಅಲ್ಲಾ, ಶಂಕರನೆ ಅಲ್ಲಾ ಕಿಂಕರನೇ ಅಲ್ಲಾ, ಹೇಳುವವನೇ ಅಲ್ಲಾ ಕೇಳುವವನೇ ಅಲ್ಲಾ, ಮೂಕನೇ ಅಲ್ಲಾ ಮಾತಾಡುವವನೇ ಅಲ್ಲಾ, ಹೆಣ್ಣೆ ಅಲ್ಲಾ ಗಂಡೇ ಅಲ್ಲಾ, ನಪುಂಸಕನೇ ಅಲ್ಲಾ ಅಂತರಪಿಶಾಚಿಯೇ ಅಲ್ಲಾ, ವಿಷಯಾತುರಿಯೇ ಅಲ್ಲಾ ವಿರಕ್ತನೇ ಅಲ್ಲ, ಇಹಲೋಕ ಇಚ್ಛಿಯೇ ಅಲ್ಲಾ ಪರಲೋಕ ಬಯಕಿಯೇ ಅಲ್ಲಾ. ಅದು ಎಂಬುವೆ ಅದು ಅಲ್ಲ, ಇದು ಎಂಬುವೆ ಇದು ಅಲ್ಲ. ಹಾಂಗೂ ಅಲ್ಲ ಹೀಂಗೂ ಅಲ್ಲ, ಅಂತೂ ಅಲ್ಲಾ ಇಂತೂ ಅಲ್ಲಾ, ಏನೂ ಅಲ್ಲಾ ಅಲ್ಲಾ ಅಲ್ಲಾ ಎಂದು ಹೆಸರಿಟ್ಟಿದ್ದರು ಎನಗೆ. ಇದು ಹೆಸರು ನಿನಗೆ ಆಯಿತು. ಅದೆಂತೆಂದೊಡೆ: ಅಲ್ಲಮಪ್ರಭು ಎಂಬುವ ನಾಮವು ನಿನಗೆ ಆಯಿತಲ್ಲದೆ ನನಗೆಲ್ಲಿಹದು? ಅದು ಕಾರಣ ನನಗೆ ನಾಮವಿಲ್ಲಾ ರೂಪವಿಲ್ಲಾ ಕ್ರೀಯವಿಲ್ಲಾ ಬಯಕೆಯಿಲ್ಲಾ ಭವವಿಲ್ಲಾ ಆವುದೂ ಇಲ್ಲಾ. ಅದೇಕೆ ನೀ ಅಲ್ಲಾ ನಾ ಇಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.