Index   ವಚನ - 58    Search  
 
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ: ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ: ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ: ಆ ಸತ್ಕರ್ಮ ಮಾಡುವದೆಂತೆನೆ: ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ, ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷ್ಠೆ - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ: ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.