Index   ವಚನ - 65    Search  
 
ಆ ಪರಶಿವನ ಚಿತ್ತ ಹೆತ್ತ ಮರ್ತ್ಯದ ಮಾನವರೊಳಗೆ ಮಹಾಜ್ಞಾನ ಜನಿಸಿ ಆತ್ಮಜ್ಞಾನವ ಪಡೆದು, ಆ ಅಖಂಡ ಜ್ಞಾನವ ಮೀರಿ ಬ್ರಹ್ಮ ತಾನಾದರೆ ಭವ ಶಿವ ಎಂಬೋದೆರಡಿಲ್ಲದಿದ್ದರಾಯಿತು. ನಾ ತಿಳಿದ ನೀ ತಿಳಿ ಎಂಬುವದು ಹೋದರೆ ಶಬ್ದಮುಗ್ಧ. ಚೋರ ತಗದಿಟ್ಟ ದ್ರವ್ಯವ ಮತ್ತೊಬ್ಬ ಚೋರ ಒಯ್ದಂತೆ ಇರಬೇಕು. ಸರ್ವವು ಒಂದಾದ ಮೇಲೆ ಹಲವು ಮಾತ್ಯಾಕೆ? ತಾ ತಿಳಿದ ಮ್ಯಾಲೆ ಸುಮ್ಮನಿರಲ್ಯಾಕೆ? ಪ್ರೇಮವಿದ್ದರೆ ಕಾಮಬಿಡುವದ್ಯಾಕೆ? ಕಾಮವಿಲ್ಲದಿದ್ದರೆ ಪ್ರೇಮವಿಡುವದ್ಯಾಕೆ? ಇವು ಇಲ್ಲದಾತಗೆ ಮೌನಮುದ್ರೆಯ ಮಾಡಿ ಯೋಚನೆ ಗೊಡವೆ ಯಾಕೆ? ಜ್ಞಾನ ಹಾನ್ಯಾದ ನಾಚಿಕೆ ಸಾಲದೆ? ಮೂಕರಾದೇವೆಂದು ಜೋಕೆಯಲ್ಲಿರುತ ಬೇಕಾದ ಕಾಲಕ್ಕೆ ತಾ ಕೈಲೆ ತೋರಿಸುವ ಇಂತಹ ಅನೇಕ ಕಳ್ಳಮೂಳರು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.