Index   ವಚನ - 76    Search  
 
ಶ್ರೀಗುರುಬಸವದೇವರು ತರುಣ ಬಾರೆಂದು ಅಂದದಿ ಕರೆದು ಕರುಣಾಜಲದಿ ಮೈದೊಳೆದು, ಶಿರದಿ ಮೇಲೆ ಪ್ರಸನ್ನ ಪರುಷಹಸ್ತವನಿಟ್ಟು, ಶಿಕ್ಷಿಸಿ ದೀಕ್ಷೆಯನೆಸಗಿ ಕರ್ಣದೊಳು ಮಹಾಮಂತ್ರವನೂದಿ ಸದಾಚಾರ ಪೇಳ್ದನೆಂತೆನೆ: ಗಂಧಪ್ರಸಾದದ ನಿವೃತ್ತಿಕಲೆಯ ಕರ್ತೃಸಾದಾಖ್ಯದೊಳು ಸತ್ ಲಕ್ಷಣವೆನಿಸಿತ್ತು. ರಸಪ್ರಸಾದದ ಪ್ರತಿಷ್ಠಾಕಲೆಯ ಕರ್ಮಸಾದಾಖ್ಯದೊಳು ಚಿತ್ ಲಕ್ಷಣವೆನಿಸಿತ್ತು. ರೂಪಪ್ರಸಾದದ ವಿದ್ಯಾಕಲೆಯ ಮೂರ್ತಿಸಾದಾಖ್ಯದೊಳು ಆನಂದ ಲಕ್ಷಣವೆನಿಸಿತ್ತು. ಸ್ವರೂಪಪ್ರಸಾದದ ಶಾಂತಿಕಲೆಯ ಅಮೂರ್ತಿಸಾದಾಖ್ಯದೊಳು ನಿತ್ಯ ಲಕ್ಷಣವೆನಿಸಿತ್ತು. ಶಬ್ದಪ್ರಸಾದದ ಶಾಂತ್ಯತೀತಕಲೆಯ ಶಿವಸಾದಾಖ್ಯದೊಳು ಪರಿಪೂರ್ಣ ಲಕ್ಷಣವೆನಿಸಿತ್ತು. ತೃಪ್ತಿಪ್ರಸಾದದ ಶಾಂತ್ಯತೀತೋತ್ತರಕಲೆಯ ಮಹಾಸಾದಾಖ್ಯದೊಳು ಅಖಂಡವೆಂಬ ಲಕ್ಷಣವೆನಿಸಿತ್ತು. ಇಂತು ಗುರುನಿರೂಪವ ಕೈಕೊಂಡು ನಿನ್ನ ಭೇದಿಸಿ ನಿನ್ನ ಸಾಧಿಸಿ ನಿನ್ನ ಶೋಧಿಸಿ ನಿನ್ನ ಅರಿದಾ ಬೆಡಗಿನ ಬೆಳಗದೊಳು ನನ್ನ ಮರೆದೆನಯ್ಯ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.