Index   ವಚನ - 2    Search  
 
ಪ್ರಣವಸ್ವರೂಪಮಾದ ಪರಬ್ರಹ್ಮವೇ ತಾನು ತನ್ನ ನಿಜಲೀಲಾನಿಮಿತ್ತ ತ್ರಿವರ್ಣರೂಪಕಮಾಗಿ, ಅದೇ ಹರಿಹರಬ್ರಹ್ಮಸ್ವರೂಪಮಾಗಿ, ಹರಿಯೇ ಶರೀರಮಾಗಿ, ಹರನೇ ಜೀವಮಾಗಿ, ಬ್ರಹ್ಮನೇ ಮನಸ್ಸಾಗಿ, ಆ ಬ್ರಹ್ಮಸ್ವರೂಪಮಾದ ಕಲೆಯೇ ಶರೀರಕ್ಕೆ ಶಕ್ತಿಯಾಗಿ, ಆ ಶರೀರಸ್ವರೂಪಮಾದ ಬಿಂದುವೇ ಪ್ರಾಣಕ್ಕೆ ಶಕ್ತಿಯಾಗಿ, ಆ ಪ್ರಾಣಸ್ವರೂಪಮಾದ ನಾದವೇ ಮನಶ್ಶಕ್ತಿಯಾಗಿ, ಆ ಪ್ರಾಣಕ್ಕೆ ನಾಸಿಕವೇ ಸ್ಥಾನಮಾಗಿ, ಮನಸ್ಸಿಗೆ ಜಿಹ್ವೆಯೇ ಸ್ಥಾನಮಾಗಿ, ಶರೀರಕ್ಕೆ ನೇತ್ರವೇ ಸ್ಥಾನಮಾಗಿ, ತನು ಸ್ಪರುಶನಸ್ವರೂಪು, ಮನಸ್ಸು ಶಬ್ದಸ್ವರೂಪು, ಪ್ರಾಣ ಆತ್ಮಸ್ವರೂಪು. ಈ ತನು ಮನಃಪ್ರಾಣಂಗಳಿಂದೊಗೆದ ಆತ್ಮಾದಿ ಷಡ್ಭೂತಂಗಳಿಗೆ ಆತ್ಮಾದಿ ಷಡ್ಭೂತವೇ ಕಾರಣಮಾಗಿ, ಜೀವನದಲ್ಲಿ ಹುಟ್ಟಿದ ಸತ್ವಗುಣವು ಶರೀರವನಾವರಿಸಿ, ಆ ಜೀವನಿಗೆ ತಾನೇ ಸ್ಥಿತಿಕರ್ತೃವಾಯಿತ್ತು. ಶರೀರದಲ್ಲಿ ಹುಟ್ಟಿದ ತಮೋಗುಣವು ಜೀವನನಾವರಿಸಿ, ಆ ಶರೀರಕ್ಕೆ ತಾನೇ ಸಂಹಾರಕರ್ತೃವಾಯಿತ್ತು. ಆ ಶರೀರ ಜೀವಸಂಗದಿಂದೊಗೆದ ಅಹಂಕಾರಸ್ವರೂಪಮಾದ ರಜೋಗುಣವು ಮನಮನಾವರಿಸಿ, ಈ ಎರಡಕ್ಕೂ ತಾನೇ ಸೃಷ್ಟಿಕರ್ತೃವಾಯಿತ್ತು. ಆ ನಾದವೇ ವಾಗ್ದೇವಿಯಾಗಿ, ಬಿಂದುವೇ ಮಹಾದೇವಿಯಾಗಿ, ಕಳೆಯೇ ಮಹಾಲಕ್ಷ್ಮಿಯಾಗಿ, ಈ ತನು ಮನಃಪ್ರಾಣಂಗಳನು ಮರುಳುಮಾಡಿತ್ತು. ಜಾಗ್ರತ್ಸ್ವಪ್ನಸುಷುಪ್ತ್ಯಾದ್ಯವಸ್ಥೆಗಳೊಳಗೆ ಹೊಂದಿಸಿ, ಮುಂದುಗಾಣಲೀಯದೆ, ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ತೊಳಲಿಬಳಲಿಸುತ್ತಿರಲು, ಆ ಕಳೆಯಲ್ಲಿ ಕೂಡಿ ಶರೀರವು ಉಬ್ಬುತ್ತಾ, ಆ ನಾದದಲ್ಲಿ ಕೂಡಿ ಮನಸ್ಸು ಕೊಬ್ಬುತ್ತಾ, ಆ ಶಕ್ತಿಯಲ್ಲಿ ಕೂಡಿ ಪ್ರಾಣ ಬೆಬ್ಬನೆ ಬೆರೆವುತ್ತಾ, ಭವಭವದೊಳು ತೊಳಲುತ್ತಿರಲು, ಗುರುಕಟಾಕ್ಷದಿಂ ಕರ್ಮವು ಸಮೆದು ಧರ್ಮವು ನೆಲೆಗೊಳ್ಳಲು, ಆ ಮೇಲೆ ಮಹಾಜ್ಞಾನಶಕ್ತಿಯಾಯಿತ್ತು ಆ ಬಿಂದುವೇ ಆನಂದಶಕ್ತಿಯಾಯಿತ್ತು ಆ ಕಳೆಯೇ ನಿಜಶಕ್ತಿಯಾಯಿತ್ತು ಇಂತು ಸತ್ಯಜ್ಞಾನಾನಂದಸ್ವರೂಪಮಾದ ಶಕ್ತಿಮಹಿಮೆಯಿಂದ ಶರೀರವೇ ವಿಷ್ಣುವಾಗಲು, ಅಲ್ಲಿ ಶ್ರೀಗುರುಸ್ವರೂಪಮಾದ ಇಷ್ಟಲಿಂಗವು ಸಾಧ್ಯಮಾಯಿತ್ತು. ಆ ಪ್ರಾಣವೇ ರುದ್ರಸ್ವರೂಪವಾಗಲು, ಜಂಗಮಮೂರ್ತಿಯಾದ ಪ್ರಾಣಲಿಂಗವು ಸಾಧ್ಯವಾಯಿತ್ತು. ಮನಸ್ಸೇ ಬ್ರಹ್ಮಸ್ವರೂಪವಾಗಲು, ಲಿಂಗಾಕಾರಮಾದ ಭಾವಲಿಂಗವು ಸಾಧ್ಯಮಾಯಿತ್ತು. ಆ ಲಿಂಗಗಳೇ ಆತ್ಮಾದಿ ಷಡ್ಭೂತಂಗಳಲ್ಲಿ ಆಚಾರಾದಿ ಮಹಾಲಿಂಗಂಗಳಾದವು. ಆ ಶಕ್ತಿಗಳೇ ಕ್ರಿಯಾದಿ ಶಕ್ತಿಯರಾದರು. ಆ ಶಕ್ತಿಮುಖದಲ್ಲಿ ತಮ್ಮಲ್ಲಿ ಹುಟ್ಟಿದ ನಾನಾವಿಷಯ ಪದಾರ್ಥಂಗಳನ್ನು ಆಯಾ ಲಿಂಗಂಗಳಿಗರ್ಪಿಸಿ, ತತ್ಸುಖಾನುಭವದೊಳೋಲಾಡುತ್ತಿರಲು, ಆ ಶಕ್ತಿಗಳೇ ಲಿಂಗಶಕ್ತಿಗಳಾಗಿ, ತಾವೇ ಆಯಾ ಲಿಂಗಸ್ವರೂಪ ಶರೀರ ಪ್ರಾಣ ಮನೋಭಾವಂಗಳಳಿದು, ಲಿಂಗಭಾವ ನೆಲೆಗೊಂಡಲ್ಲಿ, ಸತ್ವರಜಸ್ತಮೋಗುಣಗಳು ಜ್ಯೋತಿಯೊಳಗಡಗಿದ ಕತ್ತಲೆಯಂತೆ, ತಮ್ಮ ನಿಜದಲ್ಲಿ ತಾವೇ ಲೀನವಾದವು. ಬಿಂದು, ಶರೀರದೊಳಗೆ ನಿಂದು ಆನಂದರೂಪಮಾಯಿತ್ತು. ನಾದವು ಪ್ರಾಣದೊಳಗೆ ಬೆರೆದು ನಿಶ್ಶಬ್ದನಿರೂಪಮಾದ ಜ್ಞಾನಮಾಯಿತ್ತು. ಕಳೆ ಮನದೊಳಗೆ ಬೆರದು, ಪರಬ್ರಹ್ಮ ಸ್ವರೂಪಮಾಗಿ ನಿಜಮಾಯಿತ್ತು. ಆ ಆನಂದವೇ ಇಷ್ಟಲಿಂಗರೂಪಮಾಗಿ, ಜ್ಞಾನವೇ ಪ್ರಾಣಲಿಂಗಸ್ವರೂಪಮಾಗಿ, ಆ ನಿಜವೇ ಭಾವಲಿಂಗಮೂರ್ತಿಯಾಗಲು, ಆ ಕರ್ಮ ಧರ್ಮ ವರ್ಮಂಗಳಡಗಿದವು. ಆತ್ಮಾದಿ ಷಡ್ಭೂತಂಗಳು ಆಚಾರಾದಿ ಮಹಾಲಿಂಗಂಗಳೊಳಗೆ ಲೀನಮಾಗಲು, ಆ ಆರುಲಿಂಗಂಗಳೇ ಈ ಮೂರುಲಿಂಗಂಗಳೊಳಗೆ ಬೆರೆದು, ಇಷ್ಟವೇ ಪ್ರಾಣಮಾಗಿ, ಭಾವಸಂಗದೊಳಗೆ ಪರವಶಮಾಗಿ, ತಾನುತಾನೆಯಾಗಿ, ತನ್ನಿಂದನ್ಯವೇನೂ ಇಲ್ಲದೆ ನಿಬ್ಬೆರಗಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.