ಮಾನಸಸರೋವರ ಚತುಸ್ಸೋಪಾನವೀಧಿಗಳಿಂ ತುಂಬಿರ್ಪ
ಧೀವರ್ಣದ ರಸದಿಂ ಬೆಂಬಿಡದೆ ತಳದಲ್ಲಿರ್ಪ ನೆಲನೆಲ್ಲಂ ಕೆಸರಾಗೆ,
ಅದನೆ ಆಧಾರಮಾಗಿ ಬೆಳೆದು ನಾನಾ ದಳಂಗಳಿಂ ತೋರ್ಪ
ಕಮಲಂಗಳಿಂ ಸಿಕ್ಕುಬಿದ್ದಿರ್ಪ ಬಿಸಗಳಿಂ
ದೋಷಾಕರೋದಯಕ್ಕೆ ನವಕುಮುದಂಗಳಿಂ ಬಯಸುತ್ತಿರ್ಪ
ಶೈವಾಲಂಗಳಿಂ ಬೀಳುವ ಭೃಂಗಂಗಳ
ಮೇಳದಿಂದೊಪ್ಪುವ ತತ್ಸರೋವರವ
ಪಲವರ್ಣದೊಂದು ಹಂಸನಾಶ್ರಯಿಸಿ,
ಅದನೆ ತನಗಾಧಾರಮಂ ಮಾಡಿಕೊಂಡು,
ಫಲಪುಷ್ಪಯುತಮಾದ ವಸಂತಕಾಲದಲ್ಲಿ ಪೃಥ್ವಿಗೆ ಬಂದು,
ಗೂಡಮಾಡಿಕೊಂಡು, ನೀರಕ್ಷೀರಂಗಳಭೇದಮಂ ಪುಟ್ಟಿಸಿ,
ನೀರಂ ಬಿಟ್ಟು ಕ್ಷೀರಮಂ ಕೊಂಡು,
ವರ್ಷಾಕಾಲಗರ್ಜನೆಯಂ ಕೇಳಿ, ಪೃಥ್ವಿಯೊಳಗಿರ್ಪ ಗೂಡಂ ಬಿಟ್ಟು,
ತಿರಿಗಿ ಮುನ್ನಿನ ಸರೋವರಮಂ ಸೇರುತ್ತಂ,
ಮತ್ತಂ, ಪೃಥ್ವಿಯಗೂಡಂ ಸಾರುತ್ತಂ,
ಪಕ್ಷದ್ವಯಂಗಳಿಂ ಚರಿಸುತ್ತಿರಲಾ
ಹಂಸನಮೇಲೆ ಕರುಣದಿಂ ಬ್ರಹ್ಮನು ಪ್ರಸನ್ನನಾಗಿ
ನಿಜವಾಹನವಂ ಮಾಡಿಕೊಳ್ಳಲು,
ಆ ಬ್ರಹ್ಮಧಾರಣಾಶಕ್ತಿಯಿಂ ಹಂಸಂ
ಪಲವರ್ಣಮಳಿದೇಕರ್ಣಮಾಗಿ,
ಸತ್ಯಲೋಕದಲ್ಲಿ ಸಂಚರಿಸುತ್ತಾ,
ಆಕಾಶದಲ್ಲಿ ತೋರ್ಪ ಸುವರ್ಣನದೀಪ್ರವಾಹಮತಿನಿರ್ಮಲಮಾಗಿ
ಘಾತದಲ್ಲಿರ್ಪ ಅನಿಮೇಷಸಂಚಾರಂಗಳು ಸ್ವಚ್ಛ ಜೀವನದಲ್ಲಿ ಕಾಣುತ್ತಿರಲು,
ಅಲ್ಲಿ ನಲಿವುತ್ತಾ ಕೆಲಿವುತ್ತಾ ಅನೇಕ ವರ್ಣಾತ್ಮಕಮಾದ
ಸಹಸ್ರಪತ್ರಕಮಲದ ನಡುನೆತ್ತಿಯಲ್ಲಿ ತೋರ್ಪ
ಅರ್ಕಪ್ರಕಾಶದಿಂ ವಿಕಸಿತಮಾಗಿರಲಲ್ಲಿ ಸಂಚರಿಸುತ್ತಾ,
ಮಾನಸಸರೋವರದ ವಾಂಛೆಯಂ ಬಿಟ್ಟು,
ತನ್ಮಧ್ಯಕರ್ನಿಕಾ ಮಕರಂದಪಾನಮಂ
ಮಾಡಿದಾಕ್ಷಣವೇ ಪಕ್ಷಂಗಳುದುರಿ,
ತನ್ನನೇರಿಕೊಂಡಿರ್ಪ ಬ್ರಹ್ಮನಂ ತಾನೇ ನುಂಗಿ
ಹಂಸಮೇ ಲಿಂಗಮಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Mānasasarōvara catus'sōpānavīdhigaḷiṁ tumbirpa
dhīvarṇada rasadiṁ bembiḍade taḷadallirpa nelanellaṁ kesarāge,
adane ādhāramāgi beḷedu nānā daḷaṅgaḷiṁ tōrpa
kamalaṅgaḷiṁ sikkubiddirpa bisagaḷiṁ
dōṣākarōdayakke navakumudaṅgaḷiṁ bayasuttirpa
śaivālaṅgaḷiṁ bīḷuva bhr̥ṅgaṅgaḷa
mēḷadindoppuva tatsarōvarava
palavarṇadondu hansanāśrayisi,
adane tanagādhāramaṁ māḍikoṇḍu,
phalapuṣpayutamāda vasantakāladalli pr̥thvige bandu,
gūḍamāḍikoṇḍu, nīrakṣīraṅgaḷabhēdamaṁ puṭṭisi,
Nīraṁ biṭṭu kṣīramaṁ koṇḍu,
varṣākālagarjaneyaṁ kēḷi, pr̥thviyoḷagirpa gūḍaṁ biṭṭu,
tirigi munnina sarōvaramaṁ sēruttaṁ,
mattaṁ, pr̥thviyagūḍaṁ sāruttaṁ,
pakṣadvayaṅgaḷiṁ carisuttiralā
hansanamēle karuṇadiṁ brahmanu prasannanāgi
nijavāhanavaṁ māḍikoḷḷalu,
ā brahmadhāraṇāśaktiyiṁ hansaṁ
palavarṇamaḷidēkarṇamāgi,
satyalōkadalli san̄carisuttā,
Ākāśadalli tōrpa suvarṇanadīpravāhamatinirmalamāgi
ghātadallirpa animēṣasan̄cāraṅgaḷu svaccha jīvanadalli kāṇuttiralu,
alli nalivuttā kelivuttā anēka varṇātmakamāda
sahasrapatrakamalada naḍunettiyalli tōrpa
arkaprakāśadiṁ vikasitamāgiralalli san̄carisuttā,
mānasasarōvarada vān̄cheyaṁ biṭṭu,
tanmadhyakarnikā makarandapānamaṁ
māḍidākṣaṇavē pakṣaṅgaḷuduri,
tannanērikoṇḍirpa brahmanaṁ tānē nuṅgi
hansamē liṅgamāyittu kāṇā
mahāghana doḍḍadēśikāryaguruprabhuve.