Index   ವಚನ - 10    Search  
 
ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ, ಪಂಚವಕ್ತ್ರ ದಶಭುಜಂಗಳನು ಧರಿಸಿ, ತನ್ನ ನಿಜಧರ್ಮವನೆ ತನಗಾಧಾರಮಪ್ಪ ವಾಹನಮಂ ಮಾಡಿಕೊಂಡು, ಪಂಚಮುಖಂಗಳಲ್ಲಿ ಪಂಚಭೂತಂಗಳಂ ಸೃಷ್ಟಿಸಿ, ಅವನೇ ಬಂದು ಬ್ರಹ್ಮಾಂಡವಂ ಮಾಡಿಕೊಂಡು, ತನ್ನ ಲೀಲಾಶಕ್ತಿಯ ಸಂಗದಿಂದ ಅನಂತಕೋಟಿ ಜೀವಂಗಳಂ ಸೃಷ್ಟಿಸಿ, ತನ್ನ ಗೂಢಮಪ್ಪ ಮನೋಭಂಡಾರವಂ ತೆಗೆದು, ಆ ಜೀವಂಗಳಿಗದನೇ ಜೀವನವಂ ಮಾಡಿ, ಈ ಬ್ರಹ್ಮಾಂಡವೆಂಬ ತನ್ನ ಪಟ್ಟಣಕ್ಕೂ ಈ ಜೀವಜಾಲಕ್ಕೂ ನಿಜಮನೋಭಂಡಾರವನೆ ಆಧಾರಮಂ ಮಾಡಿ, ತಾನೇ ಸೇವ್ಯನಾಗಿ, ಜೀವಂಗಳೇ ಸೇವಕರಾಗಿ ಕ್ರೀಡಿಸುತ್ತಿರಲಾ ಪರಮಾತ್ಮನಿಂದ ಸಲಿಗೆವಡೆದ ಕೆಲವು ಜೀವಂಗಳು ಅಹಂಕರಿಸಿ, ಆ ಪರಶಿವನಲ್ಲಿರ್ಪ ಮನೋಭಂಡಾರದಲ್ಲಿ ತಮ್ಮ ಶಕ್ತಿಗೆ ತಕ್ಕಷ್ಟು ಸತ್ಕರಿಸಿಕೊಂಡು, ತದ್ವಂಚನಾಮನದಿಂ ಪಂಚಭೂತಂಗಳನ್ನು ಸಾಧಿಸಿ, ಅದರಿಂದ ಒಂದು ಪಿಂಡಾಂಡವೆಂಬ ಪಟ್ಟಣಮಂ ಮಾಡಿಕೊಂಡು, ಇಂದ್ರಿಯಂಗಳೆಂಬ ಕೊತ್ತಲಂಗಳಂ ನಿರ್ಮಿಸಿ, ನವದ್ವಾರಂಗಳೆಂಬ ಹುಲಿಮುಖಂಗಳಿಂದ ಅಜ್ಞಾನವೆಂಬತಿ ಘಾತಮಾದಗಳಂ ಕಲ್ಪಿಸಿ, ಆಶೆಯೆಂಬಾಳ್ವೇರಿಯಂ ಸೃಜಿಸಿ, ತನ್ಮಧ್ಯದಲ್ಲಿ ಅಂತರಂಗವೆಂಬುದೊಂದು ಅರಮನೆಯಂ ಕಟ್ಟಿ, ಅಲ್ಲಿದ್ದುಕೊಂಡು, ಜೀವನು ತನ್ನ ಮನೋವಂಚನಾಭಂಡಾರವಂ ವೆಚ್ಚಿಸುತ್ತಾ, ವಿಷಯಂಗಳೆಂಬ ಮನ್ನೆಯರಂ ಸಂಪಾದಿಸಿ, ನಿಜಪುರದ್ವಾರಂಗಳಲ್ಲಿ ಕಾಹನಿಟ್ಟು, ಅಂತಃಕರಣಚತುಷ್ಟಯವೆಂಬ ಶಿರಃಪ್ರಧಾನರಂ ಸಂಪಾದಿಸಿ, ತನ್ಮಂತ್ರಾಲೋಚನೆಯಿಂ ಸಾಮ, ಭೇದ, ದಾನ, ದಂಡವೆಂಬ ಕರಿ, ತುರಗ, ರಥ, ಪದಾತಿಗಳಂ ಕೂಡಲಿಟ್ಟು, ಕರ್ಮವೆಂಬ ಸೇನಾನಿಗೆ ಪಟ್ಟಮಂ ಕಟ್ಟಿ, ತನ್ನಲ್ಲಿರ್ಪ ನಾನಾ ದಳಂಗಳಂ ಸೇನಾಪತಿಯ ವಶಮಂ ಮಾಡಿ, ನಾದ ಬಿಂದು ಕಳೆಗಳೆಂಬ ಶಕ್ತಿಗಳಂ ಪರಿಣಯಮಾಗಿ, ಜಾಗ್ರತ್ಸ್ವಪ್ನಸುಷುಪ್ತಿಗಳೆಂಬರಮನೆಗಳೊಳಗೆ ಕಳೆಯ ನಾದದಲ್ಲಿ ಕೆಲವುತ್ತಂ, ಬಿಂದುವಿನಲ್ಲಿ ಫಲಿಸಿ ಫಲಸುಖಂಗಳನನುಭವಿಸುತಿರ್ಪ ಜೀವನೆಂಬರಸಿನನುಮತವಿಡಿದು, ಕರ್ಮಸೇನಾನಿಯು ಸಕಲದಳಂಗಳೊಳಗೆ ಕೂಡಿ, ವಿಷಯಂಗಳೆಂಬ ಮನ್ನೆಯರಂ ಮುಂದುಮಾಡಿಕೊಂಡು, ಪ್ರಪಂಚವೆಂಬ ರಾಜ್ಯವಂ ಸಾಧಿಸಿ, ತದ್ರಾಜ್ಯದಲ್ಲಿ ಬಂದ ಪುತ್ರ ಮಿತ್ರ ಕಳತ್ರ ಧನ ಧಾನ್ಯ ವಸ್ತುವಾಹನಾಲಂಕಾರಾದಿಗಳನ್ನು ಕಾಯಪುರಕ್ಕೆ ತಂದು, ಜೀವನೆಂಬರಸಿಗೆ ಒಪ್ಪಯಿಸುತ್ತಿರಲು, ಜೀವನು ಸಂತೋಷಿಸಿ, ತಾನು ಸಂಪಾದಿಸಿದ ಸಕಲದ್ರವ್ಯವನ್ನು ತನ್ನ ಮೂಲಮನೋಭಂಡಾರದಲ್ಲಿ ಬೆರಸಿ, ಬಚ್ಚಿಟ್ಟು, ಅಹಂಕರಿಸಿ, ಸಕಲಕ್ಕೂ ತಾನೇ ಕರ್ತೃವೆಂದು ಬೆರತು, ಪರಮಾತ್ಮನಂ ಮರೆತು, ಸೇವ್ಯಸೇವಕರೆಂಬ ವಿವೇಕವರತು, ಅಧರ್ಮ ವಾಹನಾರೂಢನಾಗಿ, ತನ್ನ ತಾನರಿಯದೆ, ಕಾಮವಶನಾಗಿ ಸಂಚರಿಸುತಿರ್ಪ ಈ ಜೀವನ ಅಹಂಕಾರಮಂ ಸಂಹರಿಸುವ ನಿಮಿತ್ತವಾಗಿ ಪರಮಾತ್ಮನು ಕಾಲನೆಂಬ ಸುಬೇದಾರನಂ ಸೃಷ್ಟಿಸಿ, ವ್ಯಾಧಿಪೀಡನಗಳೆಂಬ ಬಲಂಗಳಂ ಕೂಡಲಿಟ್ಟು, ದುಃಖವೆಂಬ ಸಾಮಗ್ರಿಯಂ ಒದಗಿಸಿಕೊಟ್ಟು, ಕ್ರೋಧವೆಂದು ಮನೆಯಾಳಿಂಗೆ ತಮೋಗುಣಂಗಳೆಂಬ ಬಲುಗಾರರಂ ಕೂಡಿಕೊಟ್ಟು, ಈ ಕಾಯಪುರಮಂ ಸಾಧಿಸೆಂದು ಕಳುಹಲು, ಆ ಸದಾಶಿವನಾಜ್ಞಾಶಕ್ತಿಯಿಂದ ಕಾಲಸುಭೇದಾರನು ಸಕಲ ಬಲಸಮೇತವಾಗಿ ಬಂದು, ಕಾಯಪುರಕ್ಕೆ ಸಲುವ ಪ್ರಪಂಚರಾಜ್ಯವಂ ನೆರೆಸೂರೆಮಾಡಲು, ಕರಣಂಗಳೆಂಬ ಪ್ರಜೆಗಳು ಕೆಟ್ಟೋಡಿಬಂದು, ಜೀವನೆಂಬ ಅರಸಿಗೆ ಮೊರೆಯಿಡಲು, ಅದಂ ಕೇಳಿ, ಆಗ್ರಹಪಟ್ಟು, ಕರ್ಮಸೇನಾನಿಗೆ ನಿರೂಪಿಸಲು, ತತ್ಸೇನಾನಿಯು ಕಾಯಪುರದಲ್ಲಿರ್ಪ ಸಕಲದಳ ಸಮೇತಮಾಗಿ ಬಂದು ಕಾಲಸುಬೇದಾರನೊಡನೆ ಯುದ್ಧವಂ ಮಾಡಿ, ಜಯಿಸಲಾರದೆ ವಿಮುಖನಾಗಿ ಉಪಭೋಗಾದಿ ಸಕಲ ಸುಖಂಗಳಂ ಕೋಳುಕೊಟ್ಟು ಬಂದು ಕೋಟೆಯಂ ಹೊಗಲು, ಜೀವನು ಪಶ್ಚಾತ್ತಾಪದಿಂ ಸಂಶಯಯುಕ್ತನಾಗಿ ಕಳವಳಿಸುತ್ತಿರಲು, ಆ ಕಾಲಸುಬೇದಾರನು ಕಾಯಪುರಮಂ ಒತ್ತರಿಸಿ ಮುತ್ತಿಗೆಯಂ ಹಾಕಿ, ವಿಷಯಮನ್ನೆಯರಂ ಹಸಗೆಡಿಸಿ ಕೊಂದು, ಕರ್ಮವಂ ನಿರ್ಮೂಲವಂ ಮಾಡಿ, ಅಂತರಂಗ ಮನೆಯಂ ಕೊಳ್ಳೆಯವಂ ಮಾಡಿ, ನಾದಬಿಂದುಕಳಾಶಕ್ತಿಯಂ ಸೆರೆವಿಡಿದು, ಕಾಯಪುರಮಂ ಕಟ್ಟಿಕೊಳ್ಳಲು, ಜೀವನು ಭಯಭ್ರಾಂತನಾಗಿ, ಆ ಮೂಲಮನೋಭಂಡಾರಮಾತ್ರಮಂ ಕೊಂಡು, ತತ್ಪುರಮಂ ಬಿಟ್ಟು, ಅನೇಕ ಯಾತನೆಪಟ್ಟು ಓಡಿ, ಮರಳಿಮರಳಿ ಜೀವನು ಪುರಂಗಳಂ ಸಂಪಾದಿಸಲು, ತತ್ಸಂಪಾದಿತಪುರಂಗಳಂ ಕಾಲನು ಸಾಧಿಸುತ್ತಿರಲು, ಜೀವನು ಅಹಂಕಾರವಳಿದು, ಆಸ್ಪದವಿಲ್ಲದೆ, ತನಗೆ ಕರ್ತೃವಾರೆಂಬುದಂ ಕಾಣದೆ, ವಿಚಾರಪಟ್ಟು ದುಃಖಿಸುತಿರ್ಪ ಜೀವನಿಗೆ ಕರುಣದಿಂ ಪರಮಾತ್ಮನು ಜ್ಞಾನದೃಷ್ಟಿಯಂ ಕೊಡಲು, ತದ್ಬಲದಿಂ ಶಿವನೇ ಕರ್ತೃ ತಾನೇ ಭೃತ್ಯನೆಂಬುದಂ ತಿಳಿದು, ಶಿವಧ್ಯಾನಪರಾಯಣನಾಗಿ, ಶಿವಧಾರಣ ಧರ್ಮಪದಮಂ ಪಿಡಿದು ಪಲುಗುತ್ತಿರಲು, ತದ್ಧರ್ಮಮೇ ಗುರುರೂಪಮಾಗಿ, ತನ್ನಲ್ಲಿರ್ಪ ಶಿವನಂ ಜೀವಂಗೆ ತೋರಿಸಲು, ಜೀವಂ ಹಿಗ್ಗಿ, ತಾನು ಸಂಪಾದಿಸಿದ ಪುರವನೆ ಶಿವಪುರಮಂ ಮಾಡಿ, ಧರ್ಮಾದಿ ಸಕಲವಿಷಯಬಲಂಗಳಂ ಶಿವನ ವಶಮಂ ಮಾಡಿ, ಆ ಪಟ್ಟಣದೊಳಯಿಂಕೆ ಬಿಜಯಂಗೈಸಿಕೊಂಡು ಹೋಗಿ, ಅಂತರಂಗದ ಅರಮನೆಯೊಳಗೆ ಜ್ಞಾನಸಿಂಹಾಸನದ ಮೇಲೆ ಕುಳ್ಳಿರಿಸಿ, ಪಟ್ಟಮಂ ಕಟ್ಟಿ, ತನ್ನ ಸರ್ವಸ್ವಮಂ ಶಿವನಿಗೆ ಸಮರ್ಪಿಸಿ, ತಾನು ಸತ್ಕರಿಸಿಕೊಂಡುಬಂದ ಮನೋಭಂಡಾರಮಂ ಶಿವನಡಿಯಂ ಸೇರಿಸಲು, ಸದಾಶಿವನು ಪ್ರಸನ್ನಮುಖನಾಗಿ, ದಯೆಯಿಂ ಪರಿಗ್ರಹಿಸಿ, ಜೀವನನು ಸಜ್ಜೀವನನಮಾಡಿ ಕೂಡಿಕೊಂಡುದೆ ಲಿಂಗೈಕ್ಯ ಕಾಣಾ | ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.