Index   ವಚನ - 12    Search  
 
ಗುರುವು ಮನದಲ್ಲಿ ಮಂತ್ರವನ್ನೂ, ತನುವಿನಲ್ಲಿ ಲಿಂಗವನ್ನೂ ಸ್ಥಾಪಿಸಿ, ಕರುಣರಸವನೆರೆಯಲಾಮಂತ್ರವು ಜಿಹ್ವೆಯಲ್ಲಂಕುರಿಸಿ, ಶರೀರವನಾವರಿಸಲಾ ಶರೀರದ ಭೂತತ್ವವಳಿದು, ಮಂತ್ರವೇ ಶರೀರವಾಯಿತ್ತು. ಲಿಂಗವು ನೇತ್ರದಲ್ಲಂಕುರಿಸಿ, ಮನಮನಾವರಿಸಿ, ಮನದ ಅಹಂಕಾರವಂ ತೊಲಗಿಸಿ, ಆ ಮನವೇ ಲಿಂಗವಾಯಿತ್ತು. ಮಂತ್ರವೇ ತನುವಾಗಿ ಮನವೇ ಲಿಂಗವಾದಲ್ಲಿ, ನಾಮಮಧ್ಯದಲ್ಲಿ ಪುರುಷನಿರ್ಪಂತೆ ಮಂತ್ರಮಧ್ಯದಲ್ಲಿ ಲಿಂಗವಿರ್ಪುದು ಸಹಜಮಾಯಿತ್ತು . ತನುಮನೋಮಧ್ಯದಲ್ಲಿರ್ಪ ಪ್ರಾಣಲಿಂಗವು ಮಂತ್ರದಲ್ಲಿ ಲೀನಮಾಯಿತ್ತು. ಮಂತ್ರದಲ್ಲಿ ಜಾಗ್ರ ಲಿಂಗದಲ್ಲಿ ಸುಷುಪ್ತಿ ನೆಲೆಗೊಂಡು, ಪ್ರಪಂಚವೆಲ್ಲಾ ಸ್ವಪ್ನಸ್ವರೂಪಮಾಗಿ, ಮಂತ್ರದಲ್ಲಿ ಜ್ಞಾನವು, ಲಿಂಗದಲ್ಲಿ ಆನಂದವು, ಈ ಎರಡರ ಸಂಗವೇ ನಿಜವು, ನಿಜವೇ ತಾನಾಗಿ, ತನ್ನಿಂದನ್ಯವೇನೂ ಇಲ್ಲದುದೆ ಕೇವಲ ಕೈವಲ್ಯವೆನಿಸುವುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.