Index   ವಚನ - 28    Search  
 
ಕರ್ಣದಲ್ಲಿ ಲಯವಂ ಹೊಂದಿ, ಜಿಹ್ವೆಯಲ್ಲಿ ಸೃಷ್ಟಿಯಪ್ಪ ನಾದವೇ ಸೂಕ್ಷ್ಮಮನೋರೂಪಮಾಗಿಹುದು. ಜಿಹ್ವೆಯಲ್ಲಿ ಲಯವನ್ನು ಹೊಂದಿ, ಗುಹ್ಯೆಯಲ್ಲಿ ಸೃಷ್ಟಿಯಪ್ಪ ಬಿಂದುವೇ ಸ್ಥೂಲಶರೀರರೂಪಮಾಗಿಹುದು. ಬಿಂದುವಿನ ಲಯಕ್ಕೂ ನಾದದ ಸೃಷ್ಟಿಗೂ ಜಿಹ್ವೆಯೇ ಕಾರಣಕಳಾರೂಪಮಾಗಿಹುದು. ನಾದದಲ್ಲಿ ಕೂಡಿ ಭಾವದಲ್ಲಿ ಪ್ರಕಾಶಮಾಗಿ ಬ್ರಹ್ಮಯೋನಿಯಲ್ಲಿ ಬಿಟ್ಟ ದಿವ್ಯತೇಜಸ್ಸೇ ಶರೀರಮಾಗಿ ತೋರುತ್ತಿರ್ಪುದೇ ಪರಮನು. ಬಿಂದುವಿನಲ್ಲಿ ಕೂಡಿ ಲಿಂಗಮುಖದಲ್ಲಿ ಪ್ರಕಾಶಮಾಗಿ ಕರ್ಮಯೋನಿಯಲ್ಲಿ ಬಿಟ್ಟ ತೇಜಸ್ಸೇ ಶರೀರಮಾಗಿ ತೋರುವನೇ ಜೀವಾತ್ಮನು. ಇಂತಪ್ಪ ಬಿಂದುವನ್ನು ಕರ್ಮಕಾರಣಮಾದ ಸ್ವಸ್ತ್ರೀಗರ್ಭದಲ್ಲಿ ಬಿಟ್ಟು, ಆ ಸತ್ಸಂತಾನದಿಂದ ಸ್ವರ್ಗಾದಿ ಭೋಗಂಗಳಂ ಪಡೆವಂದದಿ, ಜ್ಞಾನಕಾರಣಮಪ್ಪ ಪುರುಷನು ಗರ್ಭದಲ್ಲಿ ವಿವೇಕವೆಂಬ ಪುತ್ರನಂ ಪಡೆದು, ಅದರಿಂದ ಮೋಕ್ಷಸಾಧನೆಯಂ ಮಾಡಿಕೊಂಬನೇ ಪರಮನು. ಇಂತಪ್ಪ ಸೂಕ್ಷ್ಮಶರೀರಿಯಾದ ನಾದಮಧ್ಯದಲ್ಲಿರ್ಪ ನಿನಗೂ, ಸ್ಥೂಲಶರೀರಿಯಾದ ಬಿಂದುಮಧ್ಯದಲ್ಲಿರ್ಪ ನನಗೂ, ಜಿಹ್ವಾರೂಪಮಪ್ಪ ಮಹಾಗುರುವಿನಕರುಣದಿಂ ಸಂಬಂಧಮಾಗಿ, ಪಾಣಿಗ್ರಹಣಮಂ ಮಾಡಿಕೊಟ್ಟಬಳಿಕ ನೀನೇ ಪತಿ ನಾನೇ ಸತಿಯಾಗಿ, ನಿನ್ನ ಪರಮಾನಂದರತಿಸುಖದಲ್ಲಿ ನಾನು ಲೀನನಾದಲ್ಲಿ, ನನ್ನ ಸಂಬಂಧಮಪ್ಪ ಸ್ಥೂಲದೇಹವೆಲ್ಲಾ ನಿನ್ನ ಸಂಬಂಧಮಪ್ಪ ಸೂಕ್ಷ್ಮದಲ್ಲಿ ಲೀನಮಪ್ಪುದೇ ಕೈವಲ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.