ಪಶ್ಚಿಮದಲ್ಲಿರ್ಪ ಪೃಥ್ವಿಯೇ ಶರೀರವು,
ಉತ್ತರದಲ್ಲಿರ್ಪ ಜಲವೇ ಅನುಭವವು,
ಪೂರ್ವದಲ್ಲಿರ್ಪ ವಾಯುವೇ ತಾನಾಗಿರ್ಪುದೇ ಜೀವವು,
ದಕ್ಷಿಣದಲ್ಲಿರ್ಪ ಅಗ್ನಿಯೇ ಶರೀರವು,
ಮಧ್ಯದಲ್ಲಿರ್ಪ ಆಕಾಶವೇ ಅನುಭವವು,
ತದಂತರ್ನಿಷ್ಠವಷ್ಟವಪ್ಪ ಆತ್ಮವೇ
ನಿಜವಾಗಿರ್ಪುದೇ ಪರಮನು.
ಜೀವರೂಪಮಪ್ಪ ಭಗವತ್ಪೀಠದಲ್ಲಿ
ಪರಮಸ್ವರೂಪಮಪ್ಪ ಲಿಂಗವಂ ಪ್ರತಿಷ್ಠೆಯಂ ಮಾಡಲು,
ತದ್ವಾಯುರೂಪಮಪ್ಪ ಜೀವನು ತೇಜೋಮುಖದಲ್ಲಿ
ಉತ್ತರದಲ್ಲಿರ್ಪ ರಸವಂ ಪರಿಗ್ರಹಿಸಿ,
ಪಿಂಡಾಕಾರಮಂ ಮಾಡಿ,
ಪಶ್ಚಿಮದಲ್ಲಿ ಸೃಷ್ಟಿಸಿ, ತತ್ಪೃಥ್ವಿಯಲ್ಲಿ
ಶರೀರಾನುಭವಗಳನನುಭವಿಸುತ್ತಿರಲು,
ಜೀವನ ಶರೀರಮಪ್ಪ ಪರಮನ
ಶರೀರಮಪ್ಪ ತೇಜಸ್ಸನ್ನೊಳಕೊಂಡು,
ಜೀವಾನುಭವಮಪ್ಪ ಜಲವು
ಪರಮಾನುಭವಮಪ್ಪ ಆಕಾಶವನವಗ್ರಹಿಸಿ,
ಜೀವರೂಪಮಪ್ಪ ವಾಯುವು
ಪರಮರೂಪಮಪ್ಪ ಆತ್ಮನನೊಳಕೊಂಡು,
ಒಳಗೆ ಶಿವನೂ ಹೊರಗೆ ಜೀವನೂ ಕ್ರೀಡಿಸಿದಲ್ಲಿ,
ತಮೋರೂಪಮಪ್ಪ ಜೀವನು ಸತ್ವರೂಪಮಪ್ಪ
ಪರಮನ ತೇಜಸ್ಸನ್ನವಗ್ರಹಿಸಿ,
ನಿಜಾಂತರ್ರಜೋಮುಖದಿಂ ಬಂಧಿಸಿ ಸೃಷ್ಟಿಸಿದಲ್ಲಿ
ತದ್ರಜೋಮೂರ್ತಿಯೇ ಸೃಷ್ಟಿಕರ್ತೃವಾಯಿತ್ತು.
ಇಂತಪ್ಪ ಸೃಷ್ಟಿ ಸ್ಥಿತಿ ಸಂಹಾರಕರ್ತೃಗಳ ಶಕ್ತಿಮೂಲಮಪ್ಪ
ಜೀವನನಳಲಿಸಿ ಕಾಡುವುದೇ ಭವವು.
ಇಂತಪ್ಪ ಭವದಲ್ಲಿ ಕೋಟಲೆಗೊಳುತ್ತಿರ್ಪ ಜೀವನಿಗೆ
ದಕ್ಷಿಣದಲ್ಲಿರ್ಪ ಗುರುವು ಉತ್ತರಶಕ್ತಿಮುಖದಲ್ಲಿ ಪ್ರಸನ್ನನಾಗಿ,
ಒಳಗಿರ್ಪ ತನ್ನ ನಿಜಲಿಂಗಮೂರ್ತಿಯಂ ಹೊರಗೆ ತಂದು ತೋರಲು,
ಒಳಹೊರಗೆ ಏಕಮಾಯಿತ್ತು.
ನಡುವಿರ್ಪ ಛಾಯೆ ಮಾಯಮಾಯಿತ್ತಾಗಿ,
ಪೃಥ್ವಿಯು ಅಗ್ನಿಯೊಳೈಕ್ಯಮಾಗಿ,
ಜಲವಾಕಾಶದೊಳಗೆ ಲೀನಮಾಗಿ,
ಜೀವನು ಆತ್ಮನೊಳಗೆ ಬೆರದು
ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Paścimadallirpa pr̥thviyē śarīravu,
uttaradallirpa jalavē anubhavavu,
pūrvadallirpa vāyuvē tānāgirpudē jīvavu,
dakṣiṇadallirpa agniyē śarīravu,
madhyadallirpa ākāśavē anubhavavu,
tadantarniṣṭhavaṣṭavappa ātmavē
nijavāgirpudē paramanu.
Jīvarūpamappa bhagavatpīṭhadalli
paramasvarūpamappa liṅgavaṁ pratiṣṭheyaṁ māḍalu,
tadvāyurūpamappa jīvanu tējōmukhadalli
uttaradallirpa rasavaṁ parigrahisi,
Piṇḍākāramaṁ māḍi,
paścimadalli sr̥ṣṭisi, tatpr̥thviyalli
śarīrānubhavagaḷananubhavisuttiralu,
jīvana śarīramappa paramana
śarīramappa tējas'sannoḷakoṇḍu,
jīvānubhavamappa jalavu
paramānubhavamappa ākāśavanavagrahisi,
jīvarūpamappa vāyuvu
paramarūpamappa ātmananoḷakoṇḍu,
oḷage śivanū horage jīvanū krīḍisidalli,
tamōrūpamappa jīvanu satvarūpamappa
paramana tējas'sannavagrahisi,
nijāntarrajōmukhadiṁ bandhisi sr̥ṣṭisidalli
tadrajōmūrtiyē sr̥ṣṭikartr̥vāyittu.
Intappa sr̥ṣṭi sthiti sanhārakartr̥gaḷa śaktimūlamappa
jīvananaḷalisi kāḍuvudē bhavavu.
Intappa bhavadalli kōṭalegoḷuttirpa jīvanige
dakṣiṇadallirpa guruvu uttaraśaktimukhadalli prasannanāgi,
oḷagirpa tanna nijaliṅgamūrtiyaṁ horage tandu tōralu,
oḷahorage ēkamāyittu.
Naḍuvirpa chāye māyamāyittāgi,
pr̥thviyu agniyoḷaikyamāgi,
jalavākāśadoḷage līnamāgi,
jīvanu ātmanoḷage beradu
bhēdadōradirpude liṅgaikya kāṇā
mahāghana doḍḍadēśikāryaguruprabhuve.