Index   ವಚನ - 45    Search  
 
ಮನಸ್ಸೇ ಅಂತಃಕರಣವಾಗಿಯೂ ಶರೀರವೇ ಕರಣವಾಗಿಯೂ ಪ್ರಪಂಚವೇ ಉಪಕರಣವಾಗಿಯೂ ಇರ್ಪ ಜೀವನು, ಉಪಕರಣದಲ್ಲಿರ್ಪ ಕಳೆಯನ್ನೂ ಕರಣದಲ್ಲಿರ್ಪ ಬಿಂದುವನ್ನೂ ಅಂತಃಕರಣದಲ್ಲಿರ್ಪ ನಾದವನ್ನೂ ಮಿಥ್ಯದಲ್ಲಿ ವೆಚ್ಚಿಸಿ, ತದ್ದುಃಖಾನುಭವಕ್ಕೆ ತಾಂ ಕಾರಣಮಾಗಿರಲಾ ಜೀವಂಗೆ, ಪಂಚವಿಂಶತಿತತ್ವರೂಪವಾದ ಉಪಕರಣಂಗಳೇ ಸ್ಥೂಲವೂ ಸಪ್ತಧಾತುದಶೇಂದ್ರಿಯರೂಪವಾದ ಕರಣವೇ ಸೂಕ್ಷ್ಮವೂ ಅಹಂಕಾರಜ್ಞಾನರೂಪವಾದ ಅಂತಃಕರಣವೇ ಕಾರಣವೂ ಆಗಿ, ಕರಣಕ್ಕುಪಹತಿ ಬಂದರೆ ಉಪಕರಣಂಗಳಂ ಬಿಟ್ಟು, ಆಯಾ ಕರ್ಮವಾಸನೆಯಂ ಭಾವದಲ್ಲಿ ಗ್ರಹಿಸಿ, ಮರಳಿ ಸಂಪಾದಿಸೆನು ಎಂಬ ಭ್ರಮೆಯಿಂ ಕುದಿದುಕೋಟಲೆಗೊಂಡು ತೊಳಲುತ್ತಿರ್ಪುದೇ ಭವವು. ಇಂತಪ್ಪ ಭವಕೋಟಲೆಗೆ ಹೇಸಿ, ಮಹಾಗುರುವಿನ ಮರೆಹೊಕ್ಕು, ಆ ಗುರುವಿತ್ತ ಮಹಾಲಿಂಗದಿಂ ಇಂತಪ್ಪ ಕರಣಂಗಳಂ ಶುದ್ಧಿಮಾಡಿ, ಅಲ್ಲಿರ್ಪ ನಾದ ಬಿಂದು ಕಳೆಗಳಂ ತಲ್ಲಿಂಗಮುಖಮಂ ಮಾಡಿ, ಅಲ್ಲಿ ಬಂದ ಸುಖವನ್ನು ಲಿಂಗಕ್ಕರ್ಪಿಸಿ, ತತ್ಪ್ರಸಾದಾನುಭವ ಪ್ರವರ್ಧನಮಾಗುತ್ತಿರಲು, ನಾಹಂ ಕೋಹಂ ಸೋಹಂ ಭ್ರಮೆಗಳಡಗಿ, ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳುಡುಗಿ, ಲಿಂಗವೇ ಅಂಗಮಾಗಿ, ಲಿಂಗೋಪಭೋಗಿಯಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.