Index   ವಚನ - 48    Search  
 
ವಸಂತಕಾಲವೇ ಸೂಕ್ಷ್ಮಶರೀರವು, ವರ್ಷಾಕಾಲವೇ ಸ್ಥೂಲಶರೀರವು, ಹೇಮಂತಕಾಲವೇ ಕಾರಣಶರೀರವು, ಆಕಾಶಾತ್ಮಗಳು ನಿರ್ಮಲಮಾಗಿ ಕಾಣಪಟ್ಟುದರಿಂದ ವಸಂತಕಾಲವೇ ಬ್ರಹ್ಮಸ್ವರೂಪಾಗಿ ರಜೋಗುಣಪ್ರಾಬಲ್ಯಮಾಗಿಹುದು. ವರ್ಷಾಕಾಲವೇ ವಿಷ್ಣುರೂಪಾಗಿ, ತಮೋರೂಪಾಗಿ ಸತ್ವಗುಣಪ್ರಧಾನಮಾಗಿಹುದು. ಹೇಮಂತಕಾಲವೇ ಶಿವಸ್ವರೂಪು ಸತ್ವಸ್ವರೂಪಮಾಗಿ ತಮೋಗುಣಪ್ರಧಾನಮಾಗಿಹುದು. ವಸಂತಕಾಲದಲ್ಲಿ ಸೃಷ್ಟಿಯೂ ವರ್ಷಾಕಾಲದಲ್ಲಿ ಸ್ಥಿತಿಯೂ ಹೇಮಂತದಲ್ಲಿ ಸಂಹಾರವೂ ಆಗುವಕಾರಣ, ವಸಂತದಲ್ಲಿ ಸೂರ್ಯಪ್ರಕಾಶವು; ವರ್ಷಾಕಾಲದಲ್ಲಿ ಸೂರ್ಯಚಂದ್ರಮರು ಅಪ್ರಕಾಶರಾಗಿ ಜಡಸ್ವರೂಪಮಾದ ಮೇಘೋದಯದಿಂದ ತಮಸ್ಸು ಪ್ರಬಲಮಾಗಿರ್ಪುದರಿಂದ ತಾಮಸಪ್ರಧಾನಮಾಯಿತ್ತು. ಇಂತಪ್ಪ ಕಾಲತ್ರಯಂಗಳೇ ಜೀವನ ಪರಿಭವಕ್ಕೆ ಕಾರಣಭೂತಗಳಾಗಿರ್ಪುದನರಿತು, ವಸಂತದಲ್ಲಿ ಇಷ್ಟದೇವತಾಪೂಜೆಯನ್ನೂ ಹೇಮಂತಕಾಲದಲ್ಲಿ ಭಾವಲಿಂಗಪೂಜೆಯನ್ನೂ ವರ್ಷಾಕಾಲದಲ್ಲಿ ಪ್ರಾಣಲಿಂಗಪೂಜೆಯನ್ನೂ ಮಾಡಿ, ಈ ಕಾಲತ್ರಯಂಗಳಂ ಮರತು ಲಿಂಗತ್ರಯಂಗಳೊಳಗೆ ಬೆರದು, ಇಷ್ಟಪ್ರಾಣಭಾವಸ್ವರೂಪನಾದ ಸದಾಶಿವನಿಗೆ ಗುಣತ್ರಯಂಗಳೊಳಗೆ ಕೂಡಿದ ತನುತ್ರ್ಯಯಂಗಳನೊಪ್ಪಿಸಿ, ಜೀವನು ಕರ್ಮಮುಕ್ತನಾಗಿ, ತಲ್ಲಿಂಗಾನಂದದಲ್ಲಿ ನಾಹಂಭಾವಮುಡುಗಿ ಲಿಂಗದೊಳಗಡಗಿರ್ಪುದೇ ಕೇವಲ ಕೈವಲ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.