Index   ವಚನ - 52    Search  
 
ಕಾಯವೆಂಬ ಪುರವನಾಳುವ ಜೀವನೆಂಬರಸು ನಿಜಬಲದಿಂ ಕರ್ಮವೆಂಬ ರಾಜ್ಯದಲ್ಲಿ ಸಂಪಾದಿಸಿದ ಸುಕೃತ ದುಷ್ಕೃತಗಳೆಂಬ ದ್ರವ್ಯವನ್ನು ಮನವೆಂಬ ಬೊಕ್ಕಸದೊಳಗಿಟ್ಟು, ಅಲ್ಲಿಂದ ಶಬ್ದಾಚಾರಮುಖದಿಂದ ನರಕಾದಿ ಯಾತನೆಗಳನ್ನೂ ಸ್ವರ್ಗಾದಿ ಭೋಗಂಗಳನ್ನೂ ಅನುಭವಿಸುತ್ತಿರ್ಪ ಕೋಟಲೆಗಲಸಿ, ವೇದಾಂತಸಮುದ್ರದಲ್ಲಿ ಮುಳುಗಿ, ಅಲ್ಲಿರ್ಪ ಜ್ಞಾನವೆಂಬ ಮಕ್ತಾರತ್ನಮಂ ಕೊಂಡು, ಪರತತ್ವದೇಶದಲ್ಲಿ ಪರಿಣಾಮಿಸುತ್ತಿರ್ಪ ಗುರುವೆಂಬ ಮಹಾರಾಜಂಗೆ ಕಾಣಿಕೆಯಂ ಕೊಟ್ಟು, ಅನಂತಬ್ರಹ್ಮಾಂಡಗಳಂ ತುಂಬಿ, ತಾನನುಭವಿಸಿ, ಲಿಂಗವೆಂಬಕ್ಷಯನಿಧಾನಮಂ ಪಡೆದು, ಅದನ್ನು ಮನೋಭಂಡಾರದೊಳಿಟ್ಟು, ಅತಿಜಾಗರೂಕತೆಯಿಂ ತಾನೇ ಕಾಪಾಡುತ್ತಿರಲು, ಕತಪಯಕಾಲಕ್ಕೆ ಕಾಲದೂತರು ಬಂದು, ಅಂಗಪುರಭಂಗವಂ ಮಾಡಲು, ತತ್ಪುರವಾಸಿಗಳಾದ ರುದ್ರರು ಕಾಲದೂತರಂ ತರಿದು, ಯಮನಂ ಪರಿದು, ಲಿಂಗವಿಧಾನಬಲದಿಂ ಮೋಕ್ಷಸಾಮ್ರಾಜ್ಯಮಂ ಸಂಪಾದಿಸುತ್ತಾ ಬಾಳುವ ನಿತ್ಯಸುಖವನ್ನು ನನಗೆ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.