Index   ವಚನ - 56    Search  
 
ಸೂಕ್ಷ್ಮದಿಂದಲೇ ಸ್ಥೂಲಮುದಿಸಿ, ಆ ಸೂಕ್ಷ್ಮವು ಕಾಣಿಸದೆ ಸ್ಥೂಲವು ಕಾಣಿಸುತ್ತಿರ್ಪುದು. ಸ್ಥೂಲಶರೀರಯಾತನೇ ಬಿಡಿಸಿದಲ್ಲಿ, ಆ ಸ್ಥೂಲಮಂ ಬಿಟ್ಟು ಸೂಕ್ಷ್ಮ ಗೋಚರಮಾಗಿರ್ಪ ಲಯಂ ತಾನೇ ಗೋಚರಮಾಗಿ, ತಾನೇ ಪುನಃಸೃಷ್ಟಿಕಾರಣಮಾಗಿರ್ಪುದೆಂತೆಂದೊಡೆ: ಬೀಜದಿಂದಲೇ ಪೈರು ಪುಟ್ಟಿ, ಆ ಬೀಜಂ ಕಾಣಿಸದೆ ಪೈರೇ ಕಾಣಿಸಿ, ಆ ಪೈರಂ ಕೊಯ್ದು ತುಳಿದು ಒಕ್ಕಿದಲ್ಲಿ, ಆ ಪೈರಂ ಬಿಟ್ಟು, ಬೀಜವು ಪ್ರತ್ಯಕ್ಷಮಾಗಿ, ಫಲಯಾತೆನಗೊಳಗಾಗಿ, ಪುನಸ್ಸೃಷ್ಟಿಕಾರಣಮಾಗಿರ್ಪಂದದಿ, ಸ್ಥೂಲದೊಳಗೆ ಸೂಕ್ಷ್ಮವು, ಸೂಕ್ಷ್ಮದೊಳಗೆ ಸ್ಥೂಲವೂ ಅಡಗಿ, ಬಂದು ಕಾಣಿಸಲೊಂದು ಕಾಣಿಸದಿರ್ಪ ಈ ದಂದುಗವಂ ಬಿಡಿಸಿ, ಸಲಹುವೆಯೋ ಎಂಬೀ ಸಂದೇಹದಿಂ ಹಿಂದುಮುಂದು ತಿಳಿಯದೆ ಮಂದಮತಿಯಾಗಿರ್ಪೆನ್ನ ಬಂಧನವಂ ಬಿಡಿಸಿ, ನಿನ್ನಡಿಕೆಂದಾವರೆಯೊಳು ಸಂಬಂಧಿಸುವುದೆಂದಿಗೆ ಹೇಳಾ, ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.