Index   ವಚನ - 92    Search  
 
ಹ ಶಬ್ದಕ್ಕೆ ಹರಣಾರ್ಥವು, ಸ ಶಬ್ದಕ್ಕೆ ಯೋಗಾರ್ಥವು ಇರುವದು. ಆದುದರಿಂ ಸಂಹಾರಮೂರ್ತಿಯಾದ ರುದ್ರನೇ ಹ ಶಬ್ದ, ವಿಶ್ವಮೂರ್ತಿಯಾದ ವಿಷ್ಣುವೇ ಸ ಶಬ್ದ, ಅವೆರಡು ಶಿವಶಕ್ತಿಗಳಾಗಿಹವು. ಒಂದು ಕೂಡಿಸುತ್ತಿಹುದು, ಒಂದು ಅಗಲಿಸುತ್ತಿಹುದು, ಎರಡೂ ಕೂಡಿ ಹಸವಾಗಿಹುದು. ಹಸ ಹಸನೇ ಎಂಬ ಧಾತುವಿನಿಂ, ಹಸ ಎಂದರೆ ಕ್ರೀಡೆ, ಅವೆರಡರ ಕ್ರೀಡಾಮಧ್ಯದಲ್ಲೊಂದು ಮಿಥ್ಯಾಬಿಂದುವು ಜನಿಸಿತ್ತು. ಅದು ಒಂದರಲ್ಲಿ ಕೂಡಿದಲ್ಲದೆ ಕಾರ್ಯಕಾರಿಯಾಗದೆ ಉಚ್ಚಾರಣೆಗೆ ಯೋಗ್ಯವಲ್ಲದಿಹುದು. ದಶಸ್ಥಾನವೇ ತಾನಾಗಿ ಲೆಕ್ಕಗಳಂ ಸೃಷ್ಟಿಸುತ್ತಿರ್ಪುದರಿಂ ಬಿಂದುನಾಮವಾದುದರಿಂದದೇ ಸೃಷ್ಟಿಕರ್ತೃವಾಗಿ ಉತ್ತರಮುಖದಲ್ಲಿ ವ್ಯರ್ಥವಾಗಿ ದಕ್ಷಿಣಮುಖದಲ್ಲರ್ಥವಂ ಕೊಡುತ್ತಿರ್ಪುದರಿಂ ಹಕಾರದೊಡನೆ ಕೂಡಿ, ಹಂ ಎಂಬುದಾಗಿ, ರಜೋಮೂರ್ತಿಯಲ್ಲಿ ವಿರಮಿಸಿ ತ್ರಿಮೂರ್ತ್ಯಾತ್ಮಕಮಾದ ಪರಬ್ರಹ್ಮವೇ ತಾನೆಂದಹಂಕರಿಸುತ್ತಿರ್ಪುದಾದುದರಿಂ ಹಂಸ ಶಬ್ದಕ್ಕಾ ಮೂರ್ತ್ಯಾತ್ಮಕವೇ ಅರ್ಥವು. ಸೂರ್ಯನು ತ್ರಿಮೂರ್ತ್ಯಾತ್ಮಕನಾದುದರಿಂ ಹಂಸವೆಂಬ ನಾಮವಂ ಹೊಂದಿದನು. ತ್ರಿಗುಣಾತ್ಮಕನಾದುದರಿಂ ಜೀವನಿಗೆ ಹಂಸ ಎಂಬ ನಾಮವಾಯಿತ್ತು. ಪೂರಕವೇ ಹಕಾರ, ರೇಚಕವೇ ಸಕಾರ, ಕುಂಭಕವೇ ಬಿಂದು. ಇಂತಪ್ಪ ನಿಜಸ್ವರೂಪಮಾದ ಹಂಸ ಶಬ್ದವನ್ನು ನಾಸಿಕಾಗ್ರದಲ್ಲಿ ವಾಯುರೂಪಿಯಾದ ಜೀವನು ನಡೆಸುತ್ತಿರ್ಪನು. ಪೂರಕವು ಆತ್ಮಚಕ್ರವಂ ಭ್ರಮಿಸಿ ಶರೀರವಂ ಸಂಹರಿಸುತ್ತಿರ್ಪುದು, ರೇಚಕವು ವಿಸರ್ಜನೆಯಂ ಮಾಡಿ ಶರೀರವಂ ರಕ್ಷಿಸುತ್ತಿರ್ಪುದು, ಕುಂಭಕವು ನಾನಾಗುಣಂಗಳಂ ಸೃಷ್ಟಿಸುತ್ತಿರ್ಪುದು. ರೇಚಕವು ನಾಸಿಕವಂ ವಿಕಸನಗೊಳಿಸುತ್ತಿರ್ಪುದರಿಂ, ಪೂರಕವು ಮುಕುಳಿತವನ್ನಾಗಿ ಮಾಡುತ್ತಿರ್ಪುದರಿಂ, ಆ ರೇಚಕವೇ ವಿಷ್ಣುಸ್ವರೂಪು ಪೂರಕವೇ ಶಿವಸ್ವರೂಪು. ರೇಚಕವಂ ಬಿಟ್ಟು ಪೂರಕವಂ ಸಾಧಿಸಿದ ಪುರುಷನೇ ಮಹಾಯೋಗಿಯಾಗಿ ತಾನೇ ಬ್ರಹ್ಮಸ್ವರೂಪಿಯಾಗುವನು. ನಿನ್ನಂ ಸಾಧಿಸಿದವರು ನಿನ್ನಂತಪ್ಪರು. ನಿನ್ನನ್ನೇ ಪೂಜಿಸಿ ನಿನ್ನನ್ನೇ ಸಾಧಿಸುತ್ತಿರ್ಪ ಮಹಿಮರು ನಿನ್ನಂತಪ್ಪುದೇನಚ್ಚರಿಯೇ? ಇಂತಪ್ಪ ನಿಜಾನಂದಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.