Index   ವಚನ - 96    Search  
 
ಆಧಾರಾದಿ ಷಟ್ಚಕ್ರಂಗಳ ವಿವರಮೆಂತೆಂದೊಡೆ: ಆಚಾರಕ್ಕಾಶ್ರಮಂಗಳೇ ಆಧಾರವು, ಅದು ಬ್ರಹ್ಮಚರ್ಯಾದಿ ಚತುರ್ದಳಂಗಳಿಂದೊಪ್ಪುತ್ತಿಹುದು. ತದಾಚಾರಸೇವಕನೇ ಭಕ್ತನು. ಶ್ರದ್ಧೆಯೇ ಚೈತನ್ಯವು, ಚಿತ್ತವೇ ಹಸ್ತ, ಚಿತ್ತವೆಂದರೆ ನಿಯಮಜ್ಞಪ್ತಿಜ್ಞಾನ, ಆಶ್ರಮಂಗಳಿಗೆ ಪೃಥ್ವಿಯೇ ಮೂಲ, ಇವಕ್ಕೆ ಪ್ರಾಣವೇ ಆಧಾರಮಾಗಿ ನಾಸಿಕವನನುಸರಿಸಿರ್ಪುದು. ಗುದವೇ ಸ್ಥಾನ, ಇದಕ್ಕೆ ವಾಸಾಂತವೇ ಬೀಜವು. ಗುರುವಿಗೆ ಷಟ್ಕರ್ಮಗಳೇ ಸ್ವಾಧಿಷ್ಠಾನವು, ಯಜನಾದಿ ಷಡ್ದಳಂಗಳಿಂದೊಪ್ಪುತ್ತಿಹುದು, ಬಾದಿಲಾಂತವೇ ಬೀಜ, ತದ್ಗುರುಸೇವಕನೇ ಮಾಹೇಶ್ವರನು ನಿಷ್ಠೆಯೇ ಚೈತನ್ಯವು, ಬುದ್ಧಿಯೇ ಹಸ್ತವು, ಕರ್ಮಕ್ಕೆ ಜಲವೇ ಮೂಲವಾದುದರಿಂದ ಉಪದೇಶಕರ್ತೃವಾದುದರಿಂ ಜಿಹ್ವೆಯನನುಭವಿಸುತ್ತಿರ್ಪುದು. ಪಾತ್ರಾಪಾತ್ರ ವಿವೇಕಪರಿಶುದ್ಧಿಯಿಂ ಗುಹ್ಯವೇ ಸ್ಥಾನವಾಯಿತ್ತು. ಶಿವನಿಗೆ ದಶೇಂದ್ರಿಯಂಗಳೇ ಮಣಿಪೂರಕ, ಡಾದಿಘಾಂತವಾದ ಬೀಜದಿಂ ಶ್ರೋತ್ರಾದಿ ದಶದಳಂಗಳಿಂದೊಪ್ಪುತ್ತಿರ್ಪುದು, ತಚ್ಛಿವಪೂಜಕನೇ ಪ್ರಸಾದಿಯು. ವಿದ್ಯೆಯೇ ಚೈತನ್ಯವು, ಅಹಂಕಾರವೇ ಹಸ್ತವು, ಇಂದ್ರಿಯಂಗಳಿಗಗ್ನಿಯೇ ಮೂಲ, ದಿಙ್ಮುಖದಿಂ ಬಂದ ಸಕಲಪದಾರ್ಥಗಳನ್ನು ಇಂದ್ರಿಯಮುಖಂಗಳಲ್ಲಿ ಪೂಜಿಸುತ್ತಿರ್ಪುದರಿಂ ನೇತ್ರವನನುಸರಿಸುತ್ತಿರ್ಪುದು. ಇದಕ್ಕೆ ಉದರವೇ ಸ್ಥಾನ, ತತ್ಪೂರಣವೇ ಮಣಿಪೂರಕ, ಮಣಿಪೂರಕವೆಂದರೆ ತೇಜೋಭರಿತ. ತೇಜಸ್ಸೆಂದರೆ ಕಳಾಪದಾರ್ಥ, ಕಳೆಯೆಂದರೆ ರುಚಿ, ಭರಿತವೆಂದರೆ ಅನುಭವ, ರುಚ್ಯನುಭವವೇ ಮಣಿಪೂರಕವು. ಜಂಗಮಕ್ಕೆ ದ್ವಾದಶಭಾವಂಗಳೇ ಅನಾಹತವು, ತನ್ವಾದಿ ದ್ವಾದಶಭಾವಂಗಳೇ ದಳಂಗಳು, ಕಠಾಂತವೇ ಬೀಜ, ತಜ್ಜಂಗಮಪೂಜಕನೇ ಪ್ರಾಣಲಿಂಗಿಯು. ಅನುಭವವೇ ಚೈತನ್ನವು, ಮನವೇ ಹಸ್ತ, ಪ್ರಾಣವಾಯುವೇ ಮೂಲ, ದ್ವಾದಶಭಾವಂಗಳು ಅನುಭವಮಾದುದರಿಂದ ತ್ವಕ್ಕನ್ನನುಸರಿಸಿರ್ಪುದು. ಇದಕ್ಕೆ ಮನೋನಿಗ್ರಹದಿಂ ಹೃದಯವೇ ಸ್ಥಾನವು, ಉಪದೇಶತತ್ವವೇ ಪ್ರಸಾದವು, ಆ ಪ್ರಸಾದಕ್ಕೆ ಷೋಡಶಪದಾರ್ಥವೇ ವಿಶುದ್ಧಿ, ಪ್ರಮಾಣ ಪ್ರಮೇಯಾದಿ ಷೋಡಶಭೇದಂಗಳೇ ದಳಂಗಳು, ಅಕಾರಾದಿ ಷೋಡಶಸ್ವರಂಗಳೇ ಬೀಜ, ತತ್ಪ್ರಸಾದಸೇವಕನೇ ಶರಣನು. ಆನಂದವೇ ಚೈತನ್ಯವು, ಜ್ಞಾನವೇ ಹಸ್ತವು, ಅಕಾರವೇ ಮೂಲ, ಶಬ್ದಮುಖದಿಂ ತತ್ವವಂ ಗ್ರಹಿಸುತ್ತಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು. ತಚ್ಛಬ್ದಂಗಳಿಗೆ ಕಂಠವೇ ಸ್ಥಾನವು, ಆ ಪರತತ್ವದಿಂ ಪರಿಶುದ್ಧಮಾಗಿರ್ಪುದೇ ವಿಶುದ್ಧವು, ಮಹಾಪ್ರಕಾಶಕ್ಕೆ ಇಷ್ಟಪ್ರಾಣಂಗಳೇ ಆಜ್ಞೇಯವು, ಬಹಿರಂತರ್ವ್ಯಾಪಕಂಗಳೇ ದಳಂಗಳು, ಅದಕ್ಕೆ ಹಂ ಕ್ಷವೇ ಬೀಜ, ತದನುಸಂಧಾನಿಯೇ ಐಕ್ಯನು. ಸಮರಸವೇ ಚೈತನ್ಯವು, ಭಾವವೇ ಹಸ್ತವು, ಆತ್ಮವೇ ಮೂಲ, ವಿವೇಕಮುಖದಿಂದಾಚರಿಸುತ್ತಿರ್ಪುದರಿಂ ಮನವನನುಸರಿಸಿರ್ಪುದು. ಇದಕ್ಕೆ ಲಲಾಟವೇ ಸ್ಥಾನ, ನಮಸ್ಕಾರ ಭಸ್ಮಧಾರಣ ಕ್ರಿಯೆಗಳಿಗೆ ಕಾರಣಮಾಗಿರ್ಪುದರಿಂದಲೂ ಬೀಜಾಕ್ಷರಂಗಳಿಗೆ ಸ್ಥಾನಮಾಗಿರ್ಪುದರಿಂದಲೂ ಲಲಾಟವೇ ಕಾರಣವು. ಅಲ್ಲಿ ಮಹಾಪ್ರಕಾಶವಾಗಿರ್ಪ ಆತ್ಮನನ್ನು ಚೆನ್ನಾಗಿ ತಿಳಿಯತಕ್ಕದ್ದೇ ಆಜ್ಞೇಯವು, ಆ ಮಹದಲ್ಲಿ ಚಿಚ್ಛಕ್ತಿ ಬೆರೆಯಲು, ಆಗ್ನೇಯದಲ್ಲಿ ಇಷ್ಟಪ್ರಾಣಂಗಳೆಂಬ ದ್ವಿದಳಂಗಳು ಪ್ರಕಾಶಮಾದವು. ಪ್ರಸಾದದೊಳ್ಪರಾಶಕ್ತಿ ಬೆರೆಯಲು, ಷೋಡಶಪದಾರ್ಥಂಗಳೆಂಬ ಷೋಡಶದಳಂಗಳು ವಿಕಸನಮಾದವು. ಸ್ಥಾಣುವಾಗಿರ್ಪ ಶಿವನು ಆದಿಶಕ್ತಿಯೊಳಗೆ ಕೂಡಿ ಜಂಗಮರೂಪಾದಲ್ಲಿ ದ್ವಾದಶಭಾವಂಗಳೆಂಬ ದ್ವಾದಶದಳಂಗಳು ಪರಿಶುದ್ಧಮಾದವು. ಇಚ್ಛಾಶಕ್ತಿ ಶಿವನೊಳಗೆ ನೆರೆಯಲು, ದಶೇಂದ್ರಿಯಂಗಳೆಂಬ ದಶದಳಂಗಳು ಪೂರ್ಣಮಾದವು. ಮಂತ್ರಶಕ್ತಿ ಗುರುವಿನಲ್ಲಿ ನೆರೆಯಲು ಷಟ್ಕರ್ಮಂಗಳು ಚೇತನಮಾದವು. ಕ್ರಿಯಾಶಕ್ತಿ ಆಚಾರದೊಳಗೆ ಬೆರೆಯಲು, ಆಶ್ರಮಧರ್ಮಂಗಳು ಸಾಂಗಮಾಯಿತ್ತು. ಇಂತಪ್ಪ ಆಶ್ರಮಧರ್ಮಕ್ಕೆ ಕರ್ಮವೇ ಕಾರಣವು, ಆ ಕರ್ಮಕ್ಕೆ ಇಂದ್ರಿಯಂಗಳೇ ಕಾರಣವು, ಆ ಇಂದ್ರಿಯಂಗಳಿಗೆ ಭಾವವೇ ಕಾರಣವು, ಆ ಭಾವಕ್ಕೆ ತತ್ವವೇ ಕಾರಣವು, ಆ ತತ್ವಕ್ಕೆ ಮಹಾಪ್ರಕಾಶವೇ ಕಾರಣವು, ಆ ಮಹಾಪ್ರಕಾಶಕ್ಕೆ ತತ್ವವೇ ಮೂಲವು, ಆ ತತ್ವಕ್ಕೆ ಜಂಗಮವೇ ಮೂಲವು, ಆ ಜಂಗಮಕ್ಕೆ ಲಿಂಗವೇ ಮೂಲವು, ಲಿಂಗಕ್ಕೆ ಗುರುವೇ ಮೂಲವು, ಅಂತಪ್ಪ ಗುರುವಿಗೆ ಆಚಾರವೇ ಮೂಲವು. ಆಚಾರಕ್ಕೆ ನಿವೃತ್ತಿಯೇ ಕಳೆ, ಗುರುವಿಗೆ ಪ್ರತಿಷ್ಠೆಯೇ ಕಳೆ, ಲಿಂಗಕ್ಕೆ ವಿದ್ಯೆಯೇ ಕಳೆ, ಜಂಗಮಕ್ಕೆ ಶಾಂತಿಯೇ ಕಳೆ, ಪ್ರಸಾದಕ್ಕೆ ಶಾಂತ್ಯತೀತವೇ ಕಳೆ. ಮಹಕ್ಕೆ ಉತ್ತರವೇ ಕಳೆ. ಪೃಥ್ವೀಮೂಲವಾದ ಆಧಾರವೇ ಪಶ್ಚಿಮ, ಜಲಮೂಲವಾದ ಸ್ವಾಧಿಷ್ಠಾನವೇ ಉತ್ತರ, ತೇಜೋಮೂಲವಾದ ಮಣಿಪೂರಕವೇ ದಕ್ಷಿಣ, ವಾಯುಮೂಲವಾದ ಅನಾಹತವೇ ಪೂರ್ವ, ಸಕಲದಿಕ್ಕುಗಳಲ್ಲಿರ್ಪ ಸಕಲಚಕ್ರಂಗಳಂ ವ್ಯಾಪಿಸಿ ಆಕಾಶಮೂಲವಾಗಿ ಆಕಾಶದಂತೆ ವಿಶುದ್ಧಮಾಗಿರ್ಪುದೇ ವಿಶುಧಿಚಕ್ರವು. ಪೃಥ್ವೀಜಲಗಳೆರಡು ಸೃಷ್ಟಿ, ಅಗ್ನಿವಾಯುಗಳೆರಡು ಸ್ಥಿತಿ, ಆಕಾಶವೇ ಸಂಹಾರ. ಇಂತಪ್ಪ ಸೃಷ್ಟಿ ಸ್ಥಿತಿ ಸಂಹಾರಂಗಳಂ ಮೀರಿರ್ಪ ಆತ್ಮನೇ ಹೃದಯಮಧ್ಯದೊಳಾಗ್ನೇಯದಲ್ಲಿ ಮಹವಾಗಿ ಪ್ರಕಾಶಿಸುತ್ತಿರ್ಪನು. ಅದೇ ತೂರ್ಯ, ಮಿಕ್ಕವೆಲ್ಲಾ ಅವಸ್ಥಾತ್ರಯಂಗಳಾಗಿರ್ಪವು. ಪೂರ್ವಪಶ್ಚಿಮ ಚಕ್ರಂಗಳಲ್ಲಿ ಪೂರ್ವಪಶ್ಚಿಮರೂಪವಾಗಿ ಆದ್ಯಂತಗಳನನುಸರಿಸಿರ್ಪ ಕಠಾಂತ ವಶಾಂತಗಳೇ ಬೀಜಗಳಾದವು. ಮೊದಲನನುಸರಿಸಿರ್ಪುದೇ ದಕ್ಷಿಣವೂ, ಕಡೆಯನನುಸರಿಸಿರ್ಪುದೇ ಉತ್ತರವೂ ಆದುದರಿಂ ದಕ್ಷಿಣೋತ್ತರಂಗಳಲ್ಲಿರ್ಪ ಮಣಿಪೂರಕ ಸ್ವಾಧಿಷ್ಠಾನಂಗಳಿಗೆ ಡಘಾಂತ ಬಾಲಾಂತವೇ ಬೀಜಂಗಳಾಗಿರ್ಪವು ದಿಕ್ಕುಗಳಲ್ಲಿ ಕೋಣಗಳು ವ್ಯಾಪ್ತಮಾಗಿರ್ಪಂತೆ, ವ್ಯಂಜನಂಗಳಲ್ಲಿ ಸ್ವರಂಗಳು ವ್ಯಾಪ್ತಮಾಗಿರ್ಪುದರಿಂ, ವಿಶುದ್ಧಕ್ಕೆ ಷೋಡಶಸ್ವರಂಗಳೇ ಬೀಜಂಗಳಾಗಿರ್ಪವು. ಅಂತ್ಯಕ್ಕೂ ಅಂತ್ಯಮಾಗಿ ಅಮೃತಾರ್ಥವಂ ಕೊಡುತ್ತಾ ಪ್ರಪಂಚಾಕ್ಷರ ಪ್ರವಾಹಂಗಳಲ್ಲಿ ತಾನಿದಿರೇರಿ ಅಂತರ್ಮುಖವಾಗಿ ಪವಿತ್ರಮಯವಾಗಿ ಸಕಲಮಂತ್ರಬೀಜಮಯವಾಗಿರ್ಪ ಹಂ ಕ್ಷಕಾರವೇ ಆಗ್ನೇಯ ಬೀಜಮಾಯಿತ್ತು. ಅಕ್ಷರಂಗಳು ಹೃದಯಮಧ್ಯದಲ್ಲಿ ಚಕ್ರಂಗಳನನುಸರಿಸಿ ಜಿಹ್ವಾಮುಖದಲ್ಲಿ ಸೃಷ್ಟಿಗೆ ಬರುವಹಾಂಗೆ ಪಂಚಭೂತಂಗಳನನುಸರಿಸಿ ಪಂಚವರ್ಗಗಳಾಗಿ, ಸಪ್ತವರ್ಣಂಗಳು ಸಪ್ತಧಾತುಗಳಾಗಿ, ಷೋಡಶಸ್ವರಂಗಳು ಅವಯವಂಗಳಾಗಿ, ಆ ಹಂ ಕ್ಷ ವೇ ಜೀವಪರಮರಾಗಿ, ಸಕಾರವು ಚೈತನ್ಯರೂಪಮಾಗಿರ್ಪುದು. ಹೃದಯವೇ ಪಿಂಡಾಂಡ ಜಿಹ್ವೆಯೇ ಬ್ರಹ್ಮಾಂಡ, ಪಿಂಡಾಂಡದೊಳ್ಪಂಚಭೂತಂಗಳು ಸಮಾನವಾಗಿರ್ಪಂತೆ, ಜಿಹ್ವೆಯಲ್ಲಿ ಪಂಚವರ್ಣಗಳು ಸಮಾನವಾಗಿರ್ಪವು. ಇಂತಪ್ಪ ಮೂರ್ತಿಯೇ ನಾದಪುರುಷನು, ಇವಂಗೆ ಪ್ರಣವವೇ ಶಿಖೆಯೂ ಶಿವಾಯಾಕ್ಷರತ್ರಯಂಗಳೇ ಉಪವೀತವೂ ನಮವೇ ದಂಡ ಕಮಂಡಲುಗಳೂ ಆಗಿರ್ಪವು. ಇಂತು ಪ್ರಣವಪಂಚಾಕ್ಷರಿಯುಕ್ತಮಾದ ನಾದಪುರುಷನೇ ಪರಿಶುದ್ಧಮಾಗಿ, ಬ್ರಹ್ಮಸ್ವರೂಪಮಾದ ವೇದಪುರುಷನಾಗಿ, ತನುಮನೋಭಾವಗಳಲ್ಲಿ ಸಂಚರಿಸುತ್ತಿಹನು. ಆಧಾರದಲ್ಲಾಚಾರರೂಪಮಾಗಿರ್ಪ ಆಶ್ರಮವೇ ಅನಾಹತದಲ್ಲಿ ಜಂಗಮಪ್ರಕಾಶವಂ ಮಾಡಿತ್ತು. ಸ್ವಾಧಿಷ್ಠಾನದಲ್ಲಿ ಗುರುರೂಪಮಾದ ಕರ್ಮವೇ ಮಣಿಪೂರಕದಲ್ಲಿ ಲಿಂಗಪ್ರಕಾಶವಂ ಮಾಡಿತ್ತು. ವಿಶುದ್ಧದಲ್ಲಿ ಪ್ರಸಾದರೂಪವಾದ ತತ್ವವೇ ಆಗ್ನೇಯದಲ್ಲಿ ಮಹಾಪ್ರಕಾಶವಂ ಮಾಡಿತ್ತು. ಇಷ್ಟಪ್ರಾಣಮಧ್ಯದಲ್ಲಿರ್ಪ ಮಹವೇ ಸಹಸ್ರಮುಖವಾಗಿ ತೋರುತಿರ್ಪ ಭಾವಮಧ್ಯದಲ್ಲಿ ಪೂರ್ವಪ್ರಕಾಶಮಾಗಿ, ಎಲ್ಲವೂ ಒಂದೆಯಾಗಿ, ತಾನೂ ಹೊಂದಿರ್ಪುದರಿಂ ಸಹಸ್ರದಳ- ಕಮಲಮಧ್ಯದಲ್ಲಿರ್ಪ ಭಾವಲಿಂಗಮಾಯಿತ್ತು. ಉನ್ಮೀಲನಾಕ್ಷಿಗಳಿಂ ನಾಸಿಕಾಗ್ರವನ್ನೀಕ್ಷಿಸಿದಲ್ಲಿ ಬ್ರಹ್ಮಸ್ಥಾನ ಗೋಚರಮಾಗಿ, ಅಲ್ಲಿ ಭಾವಸಹಸ್ರಭೇದಮಾಗಿ ಬ್ರಹ್ಮವಂ ವಿಚಾರಿಸುವುದರಿಂ ಸಹಸ್ರದಳಕಮಲಕ್ಕೆ ಶಿರಸ್ಸೇ ಸ್ಥಾನಮಾಯಿತ್ತು. ಹೃದಯಮಧ್ಯಕ್ಕೂ ಬ್ರಹ್ಮಸ್ಥಾನಕ್ಕೂ ಏಕಮಾಗಿ ಜ್ಯೋತಿರ್ಮಯವಾಗಿ ಪ್ರಕಾಶಿಸುತ್ತಾ ತತ್ವದಿಂ ತೋರುವ ಮಹಪ್ರಕಾಶವನ್ನು ಭಾವಹಸ್ತದಲ್ಲಿ ಗ್ರಹಿಸಿ ಭಾವಪೂಜೆಯಂ ಮಾಡುತ್ತಿರ್ಪುದೇ ಭಾವಲಿಂಗವು. ಶಿವನನ್ನು ಜ್ಞಾನಹಸ್ತದಲ್ಲಿ ಗ್ರಹಿಸಿ, ಹೃತ್ಕಮಲಮಧ್ಯದಲ್ಲಿ ಜಂಗಮರೂಪದಲ್ಲಿ ಧ್ಯಾನಪೂಜೆಯಂ ಮಾಡುತ್ತಿರ್ಪುದೇ ಪ್ರಾಣಲಿಂಗವು. ಆಚಾರವಿಡಿದು ಗುರುಮುಖದಲ್ಲಿ ಗ್ರಹಿಸಿ, ಕರ್ಮಪೂಜೆಯಂ ಮಾಡುತ್ತಿರ್ಪುದೇ ಇಷ್ಟಲಿಂಗವು. ಇಂತಪ್ಪ ಇಷ್ಟಲಿಂಗವಂ ಪೂಜಿಸುವ ಸ್ಥೂಲವೇ ವಿಶ್ವ, ಪ್ರಾಣಲಿಂಗವಂ ಪೂಜಿಸುವ ಸೂಕ್ಷ್ಮಶರೀರವೇ ತೈಜಸ, ಭಾವಲಿಂಗವಂ ಪೂಜಿಸುವ ಕಾರಣಶರೀರವೇ ಪ್ರಾಜ್ಞ, ಪ್ರಾಜ್ಞಕ್ಕೆ ಯೋಗವೇ ಮುಖ, ಈ ಮುಖದಲ್ಲಾ ಲಿಂಗಕ್ಕರ್ಪಣವಾಗುವುದು. ತೈಜಸಕ್ಕೆ ಭೋಗವೇ ಮುಖ, ಈ ಮುಖದಲ್ಲಾ ಲಿಂಗಕ್ಕರ್ಪಣವಾಗುತ್ತಿಹುದು. ವಿಶ್ವಕ್ಕೆ ತ್ಯಾಗವೇ ಮುಖ, ಈ ಮುಖದಲ್ಲಾ ಲಿಂಗಕ್ಕರ್ಪಣವಾಗುವುದು. ಆಚಾರ ಗುರು ಶಿವಚರಶೇಷಮಹಸ್ವರೂಪಮಾದ ಇಷ್ಟಲಿಂಗವೇ ಪ್ರಾಣಲಿಂಗವಾಗಿ ಒಳಗೂ ಹೊರಗೂ ತಾನೇ ಪ್ರಕಾಶಿಸಿ ಭಾವದಲ್ಲೆಲ್ಲವೂ ಒಂದೆಯಾಗಿ ತೋರುತಿರ್ಪ ಪರಿಪೂರ್ಣಾನಂದಮಯ ನಿರ್ವಾಣಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶ