Index   ವಚನ - 99    Search  
 
ಹಕಾರವೇ ಶಿವನು, ಬಿಂದುವೇ ಪ್ರಕೃತಿಯು, ಇವು ಮಿಥ್ಯಾಮಿಥ್ಯಗಳಾಗಿಹವು. ಮಿಥ್ಯಾಪ್ರಕೃತಿಯೊಳಗೆ ಕೂಡಿದ ಶಿವನೇ ಹಮ್ಮಾಯಿತ್ತು. ನಿಶ್ಚೇಷ್ಟಿತವಾದ ಬ್ರಹ್ಮದಲ್ಲಿ ಕಾಲವಶಾದ್ವಿಕಾಸಮುಕುಳನಗಳಾಗುತ್ತಿರ್ಪುದರಿಂ ಬಿಂದುವಿನ ವಾಸನೆಯೇ ಆ ಪರಮಾತ್ಮಸಂಗದಿಂ ಪ್ರಪಂಚಸೃಷ್ಟಿಕರ್ತೃವಾಗಿ, ವಿಕಸನವೇ ಸ್ಥಿತಿಕರ್ತೃವಾಗಿ, ಮುಕುಳನವೇ ಸಂಹಾರಕರ್ತೃವಾಗಿ, ಈ ಸೃಷ್ಟಿ ಸ್ಥಿತಿ ಸಂಹಾರಗಳಿಗಾ ಬಿಂದುವೇ ಕಾರಣಮಾಗಿ, ಆ ಬ್ರಹ್ಮವೆ ಬಿಂದುರೂಪಮಾದ ಕಾರಣಕ್ಕೆ ತಾಂ ಕಾರಣಮಾಗಿ, ಆ ಬಿಂದು ಕಾರಣಪ್ರಕೃತಿಯುಕ್ತಮಾಗಿ ಎಡೆಬಿಡದಿರ್ಪುದರಿಂ ತಾನೇ ಹಂ ಆಯಿತ್ತು. ಹಕಾರದಲ್ಲಿ ಕಕಾರವೂ, ಬಿಂದುವಿನಲ್ಲಿ ಸಕಾರವೂ ಪ್ರಪಂಚ ಸೃಷ್ಟಿಸ್ಥಿತಿಸಂಹಾರನಿಮಿತ್ತಮಾಗುತ್ಪನ್ನಮಾಗುತ್ತಿರ್ಪುದರಿಂ `ಕಸಯೋರ್ಯೋಗೇ ಕ್ಷ' ಎಂದಾಯಿತ್ತು. ಹ ಎಂಬುದೇ ಲಿಂಗವು, ಅಕಾರ ಸಕಾರಯೋಗದಲ್ಲಿ ಸಕಾರವೇ ಹಕಾರಮಾಯಿತ್ತು. ಆ ಪ್ರಕೃತಿಯೊಳ್ಪುಟ್ಟಿದ ಸಕಾರವೇ ಸ್ತ್ರೀಲಿಂಗಮಾದುದರಿಂ ಶಕ್ತಿಯಾಯಿತ್ತು. ಹಕಾರದಲ್ಲಿ ಹುಟ್ಟಿದ ಸಕಾರವೇ ಪುಲ್ಲಿಂಗಮಾಯಿತ್ತು. ಮಧ್ಯದಲ್ಲಿರ್ಪ ಹಂ ಎಂಬ ಪರಬ್ರಹ್ಮದಿಂ ಭೂತಭವಿಷ್ಯಂಗಳಲ್ಲಿ ಪ್ರಕಾಶಮಾಯಿತ್ತು. ಆ ಭೂತಗಳಲ್ಲಿರ್ಪ ಸಕಾರದೊಳಗೆ ಕೂಡಿ ಸೋಹಂ ಆಯಿತ್ತು, ಆ ಭವಿಷ್ಯದೊಳಗಿರ್ಪ ಕಕಾರದೊಳಗೆ ಕೂಡಿ ಕೋಹಂ ಆಯಿತ್ತು, ಅದೇ ಭಿನ್ನವು ಇದೇ ಅಭಿನ್ನವು. ಭಿನ್ನವೇ ಇಷ್ಟಲಿಂಗವು, ಅಭಿನ್ನವೇ ಪ್ರಾಣಲಿಂಗವು. ಭಿನ್ನಾಭಿನ್ನಗಳ ಮಧ್ಯದಲ್ಲಿ ಪ್ರಕಾಶಿಸಿ ಇಷ್ಟಪ್ರಾಣಂಗಳಿಗೆ ಚೈತನ್ಯಮಾದ ಹಮ್ಮೇ ಭಾವಲಿಂಗವು. ಮಹದಹಮ್ಮಿನಲ್ಲಿ ನನ್ನ ಹಮ್ಮುಡುಗಿ ಸುಮ್ಮನೆ ಇರ್ಪಂತೆ ಮಾಡಿ ಕೂಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.