Index   ವಚನ - 101    Search  
 
ಭಾವಮೆಂಬುದು ಸತ್ವಪದಾರ್ಥವು. `ಅಸಮನ್ತಾನ್ಮನ್ಯತೇ ಇತ್ಯಾತ್ಮಾ' ಎಂಬ ವ್ಯುತ್ಪತ್ತಿಯಿಂ ಚೆನ್ನಾಗಿ ಪ್ರಕಾಶಿಸುತ್ತಿರ್ಪುದೇ ಆತ್ಮನು. ಪ್ರಕಾಶವೆಂದರೆ ಮಹಾಜ್ಞಾನ, ಅದು ನಿಜವಂ ಹೊಂದಿರ್ಪುದು. ಭಾ ಎಂದರೆ ಪ್ರಕಾಶ, ವ ಎಂದರೆ ವಹಿಸುವುದು, ಆ ಪ್ರಕಾಶಾತ್ಮನಂ ವಹಿಸುವುದೇ ಭಾವವಾಯಿತ್ತು. ಆತ್ಮನು ಅನಾದಿಸಂಸಾರವೇ ತಾನಾಗಿರ್ಪುದರಿಂದಲೂ ದಿವ್ಯಜ್ಞಾನಪ್ರಕಾಶದಿಂ ಸಕಲರನ್ನು ರಕ್ಷಿಸುತ್ತಿರ್ಪುದರಿಂದಲೂ `ಭಯಾದವತೀತಿ ಭಾವಃ' ಎಂಬ ವ್ಯುತ್ಪತ್ತಿಯಿಂ ಭಾವಮಾಯಿತ್ತು. ವಿಭುವಾದ ಆತ್ಮನ ಕರ್ಮಕ್ಕೆ ತಾನು ಸಂಬಂಧಮಾದುದರಿಂ ಭಾವವೇ ಕ್ರಿಯಾರೂಪು. ಜ್ಞಾನರೂಪಿಯಾದ ಶಿವನು ಅಕಾರದೊಳ್ಕೂಡಿ ಆತ್ಮನೆನಿಸಿರ್ಪುದರಿಂ ಅಕಾರವೆಲ್ಲವೂ ಶಕ್ತಿ, ತಾನೊಬ್ಬನೇ ಶಿವನಾದುದರಿಂ, ಅಂತಪ್ಪ ಅಕಾರರೂಪಮಾಗಿ ಭಾವಸಂಬಂಧಮಾಗಿರ್ಪುದೇ ಭಾವವು, ಅಂತಪ್ಪ ಆದಿಶಕ್ತಿಸಂಗದಿಂ ಸಾಕಾರರೂಪಿಯಾದ ಶಿವನೇ ಇಷ್ಟಲಿಂಗವು, ಅಂತಪ್ಪ ಶಿವಸಂಗದಿಂ ಸಾಕಾರರೂಪವಾದ ಭಾವವೇ ಕ್ರಿಯೆ, ಆ ಕ್ರಿಯಾರೂಪವಾದ ಭಕ್ತನೇ ಶಕ್ತಿರೂಪಿಯಾದುದರಿಂ ಲಿಂಗವೇ ಪತಿ, ಶರಣನೇ ಸತಿ, ಈರ್ವರ ಸಮರಸಾನಂದವೇ ಮೋಕ್ಷ. ಇಂತಪ್ಪ ಸತ್ಯಜ್ಞಾನಾನಂದವೇ ಶಿವಶರಣರ ಸಂಗ, ಅದೇ ಏಕಮೇವಾದ್ವಿತೀಯಂ ಬ್ರಹ್ಮವು. ಅಂತಪ್ಪ ಬ್ರಹ್ಮಾನಂದಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.