Index   ವಚನ - 108    Search  
 
ತತ್ತ್ವಮಸಿ' ಎಂದರೆ ಅದೇ ನೀನಾಗುತ್ತಿ ಎಂಬರ್ಥವು. ಅದೆಂಬುದೆ ನಿಜವು, ಆಗುವುದೆಂಬುದೇ ಸಿದ್ಧಿಯು, ಆ ಸಿದ್ಧಿಯೇ ಆನಂದವು. ಪೃಥಿವ್ಯಾದಿ ಪಂಚಭೂತಂಗಳು ತತ್ವಸ್ವರೂಪಮಾಗಿಯೂ ಪಂಚಬ್ರಹ್ಮಮಯವಾಗಿಯೂ ಇರ್ಪುದರಿಂದಾ ತತ್ವವೇ ತಾನಾಗುತ್ತಿದ್ದೇನೆಂಬುದರ್ಥ. ಅಂತಪ್ಪ ಪಂಚತತ್ವಗಳು ರಸಪೂರಿತ ಘಟನೆಗಳೋಪಾದಿಯದಲ್ಲಿ ಕರ್ಮಪೂರಿತ ಶರೀರಂಗಳಾಗಲಾ ಕರ್ಮಮಧ್ಯದಲ್ಲಿ ಛಾಯೆಯು ಪ್ರಕಾಶಿಸಲದೇ ತಾನೆಂಬುದೇ ಸತ್ವಗುಣವು, ಆ ಬ್ರಹ್ಮವೇ ತಾನೆಂಬುದೇ ತಮೋಗುಣವು. ಆ ಒಂದು ವಸ್ತುವೇ ಎರಡರಲ್ಲಿ ಭಿನ್ನವಾಗಿ ಆ ಬ್ರಹ್ಮವನೆ ಪ್ರಪಂಚಕ್ಕೆ ತರುತ್ತಾ ಆ ಜೀವನನ್ನು ಮೋಕ್ಷದೊಳ್ಪೊಂದಿಸುತ್ತಿರ್ಪುದರಿಂ ತಾನೇ ಕಾರಣಮಾಯಿತ್ತು. ತತ್ಪ್ರಕಾಶಮಾದೊಡೆ ಛಾಯಾಪ್ರಕಾಶವು, ಛಾಯಾಪ್ರಕಾಶವೇ ಶಿವಾಲಂಕಾರವು, ಅಲಂಕಾರಸಮಾಪ್ತಿಯೇ ತತ್ವಮೋಚನವು, ತತ್ವಮೋಚನೆಯೇ ಛಾಯಾಮೋಕ್ಷವು, ಛಾಯಾಮೋಕ್ಷವೇ ಲಿಂಗೈಕ್ಯವು. ಅಂತಪ್ಪ ಲಿಂಗೈಕ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.