Index   ವಚನ - 111    Search  
 
ಚತುರ್ಯುಗಂಗಳು ಪುಂಗವ ರೂಪಾಗಿರ್ಪ ಧರ್ಮಪದಂಗಳನಾಶ್ರಯಿಸಿರ್ಪುದರಿಂ ಇವೆಲ್ಲಕ್ಕೂ ಧರ್ಮವೇ ಕಾರಣಮಾಯಿತ್ತು. ಆದಿಯಲ್ಲಿ ಧರ್ಮಯುಗದಲ್ಲಿ ಕರ್ಮ ಪುಟ್ಟಿ ಕರ್ಮವಿರಿವಿಗೊಳುತಿರ್ಪುದೆ ಅಧರ್ಮಮಾಗಿ ಅದಕ್ಕೆ ತಾವುಗೊಟ್ಟು ಧರ್ಮಪಾದವನೆತ್ತುತ್ತಿರಲು ಅದೇ ಯುಗ ಪ್ರಮಾಣಮಾಗಿ ಧರ್ಮದೊಳಗೆ ಕೂಡಿ ಕಾಲನಷ್ಟಮಾಗುತ್ತಿರ್ಪುದರಿಂ ಆದಿ ಯುಗಂಗಳಧಿಕಮಾಗಿ ಅಂತ್ಯಯುಗಂಗಳು ಸ್ವಲ್ಪಮಾಯಿತ್ತು. ಧರ್ಮಾಧರ್ಮ ವ್ಯತ್ಯಯವೆ ಚತುರ್ಯುಗದಲ್ಲಿ ಚತುರ್ವರ್ಣಾತ್ಮಕಮಾಗಿ ಚತುರ್ವಿಧ ಪುರುಷಾರ್ಥಂಗಳೆ ಚತುರ್ವಿಧ ಪುರುಷರಾಗಿರ್ಪರು. ಧರ್ಮವೇ ಶೂದ್ರ, ಅರ್ಥವೇ ವೈಶ್ಯ, ಕಾಮವೆ ಕ್ಷತ್ರಿಯ, ಮೋಕ್ಷವೆ ಬ್ರಾಹ್ಮಣನಾಯಿತ್ತು. ಬ್ರಹ್ಮಾಂಡಮಯಮಾಗಿರ್ಪ ಮಹಾಯುಗದಲ್ಲಿ ಪಿಂಡಾಂಡಮಯವಾಗಿರ್ಪ ಪುರುಷಾಯುಃ ಪ್ರಮಾಣವು ಧರ್ಮವ ಯುಗಂಗಳು ಆಶ್ರೈಸಿದಂತೆ, ಯುಗಂಗಳನಾಯುಷ್ಯಗಳಾಶ್ರೈಸಿ ಸ್ವಲ್ಪ ಮಾಗುತ್ತಿರ್ಪುದು. ಅದೆಂತೆಂದಡೆ: ಬ್ರಹ್ಮಾಂಡ ಪುರುಷನ ಜೀವನೆ ಜೀವನಾಗಿ, ದೇವತೆಗಳೆ ಕರಣಂಗಳಾಗಿರ್ಪರು. ಅಂತಪ್ಪ ಬ್ರಹ್ಮಾಂಡವೆ ಪಿಂಡಾಂಡಮಾಗಿ, ಆ ಸ್ಥೂಲವೆ ಸೂಕ್ಷ್ಮವಾಗಿರ್ಪುದರಿಂ ಬಾಹ್ಯಸ್ಪತ್ಯಮಾನವೆ ಆಯು ನಿರ್ಣಯಕಾಲಮಾಯಿತ್ತು. `ಶತಾಯುಃ ಪುರುಷಶ್ಯತೇಂದ್ರಿಯ'ಯೆಂಬ ಶೃತಿಯಿಂ ಅಧರ್ಮ ಪದವೆ ಪುರುಷ ರೂಪಮಾಗಿರ್ಪುದರಿಂ ಅರ್ಧಮವನಾಶ್ರೈಸಿ ಚತುರ್ಯುಗಂಗಳಲ್ಲಿ ಆಯುಃ ಪ್ರಮಾಣಮಾಯಿತ್ತು. ಅದರಿಂ ಬಾರ್ಹಸ್ಪತ್ಯಮಾನ ಬ್ರಹ್ಮಾಂಡದಲ್ಲಿ ನಾಲ್ಕು ಲಕ್ಷವು ಮೂವತ್ತೆರಡು ಸಾವಿರಕ್ಕೂ ಪಿಂಡಾಂಡದಲ್ಲಿ ನೂರುವರ್ಷಕ್ಕೂ ಸಂಬಂಧಮಾದುದೆಂತೆಂದಡೆ: ಜೀವನ ಬ್ರಹ್ಮಾಂಡ ಭ್ರಮಣ ಚಕ್ರಗತಿ ಮುನ್ನೂರರುವತ್ತಾದಡೆ, ಪ್ರಾಗ್ಗತಿ ಐದು ಘಳಿಗೆಯೆಂದರೇರುತಿರ್ಪುದರಿಂ ಆ ವರುಷಕ್ಕೂ ಐದು ಘಳಿಗೆ ರಾಶಿ ಒಂದೆಯಾಯಿತ್ತು. ನಾಲ್ಕು ಸಾವಿರದ ಮುನ್ನೂರಿಪ್ಪತ್ತೈದು ಘಳಿಗೆಗಳೆ ಒಂದು ವರುಷಮಪ್ಪಂತೆ ನೂರುವರುಷವನ್ನು ನಾಲ್ಕು ಸಾವಿರ ಮುನ್ನೂರಿಪ್ಪತ್ತರಲ್ಲಿ ಹೆಚ್ಚಿಸಲು ನಾಲ್ಕು ಲಕ್ಷವು ಮೂವತ್ತೆರಡು ಸಾವಿರ ವರುಷವಾಯಿತ್ತು. ಅದೇ ಧರ್ಮಪುರುಷ ಪ್ರಮಾಣವಾಯಿತ್ತು. ಕೃತಯುಗದಲ್ಲಿ ನಾಲ್ಕು, ತ್ರೇತೆಯಲ್ಲಿ ಮೂರು, ದ್ವಾಪರದಲ್ಲಿ ಎರಡು, ಕಲಿಯುಗದಲ್ಲಿ ಒಂದು ಇಂತು ಚತುರ್ವಿಧ ಪುರುಷತ್ವವೆ ದಶವಿಧ ಧರ್ಮ ಪುರುಷವಾಗಿ, ಎಲ್ಲವು ಸಹಸ್ರ ಪುರು[ಷ] ಒಂದೆಯಾಗಿ ಪರಿಣಮಿಸಿ ಹತ್ತೊಂದಾಗಿ, ಒಂದು ಹತ್ತಾಗಿರ್ಪುದೆ ಆಯುಃಪ್ರಮಾಣ. ಈ ಒಂದು ಹತ್ತಾಗಿರ್ಪನೆ ವಿಷ್ಣು, ಹತ್ತೊಂದಾಗಿರ್ಪನೆ ಶಿವನು, ಇವು ನಾಲ್ಕಾಗಿರ್ಪನೆ ಬ್ರಹ್ಮನು. ಇಂತಪ್ಪ ತ್ರಿಮೂತ್ರ್ಯಾತ್ಮಕಮಾಗಿರ್ಪ ಆಯುವೆ ಪ್ರಾಣಲಿಂಗ. ಇಂತಪ್ಪ ಸಹಸ್ರಾಯುವೆ ಸಹಸ್ರ ಮುಖದಲ್ಲಿ ಹೆಚ್ಚುತ್ತಿರಲು ಅದೇ ಬ್ರಹ್ಮಗೊಂದು ದಿವಸವಾಯಿತ್ತು. ಜೀವನು ಒಂದು ಮಹಾಯುಗಕ್ಕೆ ಸಾವಿರ ವರುಷ ಪುರುಷ ಜನ್ಮವೆತ್ತುತ್ತಿಹನು. ಅದರಿಂ ಶತಾಯುವು ಬದುಕಿದ ಆ ಪುರುಷನಿಗೆ ನಾಲ್ಕು ಲಕ್ಷವು ಮೂವತ್ತೆರಡು ಸಾವಿರ ವರುಷಪರಿಯಂತವು ಪುನಃ ಮನುಷ್ಯ ಜನ್ಮವಿಲ್ಲ. ಅರ್ಧಾಯುಷ್ಯದಲ್ಲಿ ಮಡಿದ ಪುರುಷನು, ಕಡಿಮೆ ಆಯುಷ್ಯವನನುಭವಿಸುವ ನಿಮಿತ್ಯ ಮನುಷ್ಯ ಜನ್ಮವನೆತ್ತುವನು. ಆದಿಕಾಲಂಗಳಿಂದ ಅಂತ್ಯಕಾಲ ಅಧರ್ಮಮಯಮಾಗಿರ್ಪುದರಿಂ ಸ್ವಲ್ಪಾಯುಷ್ಯದಲ್ಲಿ ಮಡಿದವನು ಅಂತ್ಯಕಾಲಂಗಳಲ್ಲಿ ಜನ್ಮವೆತ್ತುತಿರ್ಪುದರಿಂ ಸ್ವಲ್ಪಾಯುಷ್ಯವೆ ಹೀನಮಾಯಿತ್ತು. ಮೊದಲ ಜನ್ಮದಲ್ಲೆ ಕಾಲ ಸವೆದು ಈ ಜನ್ಮದಲ್ಲಿ ಸ್ವಲ್ಪ ಕಾಲ ಬಾಳುತ್ತಿಪ್ಪ ಪುರುಷನಿಗೆ ಧರ್ಮವಾಸನೆಯೇ ಸಾಕ್ಷಿ. ಈ ಜನ್ಮ ದುಷ್ಕರ್ಮದಿಂದಲೇ ಅರ್ಧಾಯುಷ್ಯಮಾಗಿ ಮುಂದೆ ಹೀನ ಜನ್ಮವನೆತ್ತುತ್ತಿರ್ಪಾತನಿಗೆ ಅಧರ್ಮವಾಸನೆಯೇ ಸಾಕ್ಷಿ. ಇಂತಪ್ಪ ಧರ್ಮಾಧರ್ಮ ವಾಸನೆಗೂಡಿ ಕರ್ಮ ಸಂಪಾದಿತ ಮನುಷ್ಯಜನ್ಮದಲ್ಲಿ ದಶಲಕ್ಷ ವರುಷ ಜನಿಸುತ್ತಿರಲು ಆ ಬ್ರಹ್ಮ ಚಕ್ರದಲ್ಲಿ ಅಹಸ್ಸಂ ಸಮೆದು ಬ್ರಹ್ಮದ ಸುಷುಪ್ತಿ ಚಕ್ರ ಮುಖದಲ್ಲಿ ಬೀಳುತ್ತ ಅಲ್ಲಿ ದಶಲಕ್ಷ ವರುಷ ಪ್ರೇತಪುರುಷರಾಗಿ ಸ್ವಪ್ನಚಕ್ರದಲ್ಲಿ ಗಮಿಸುತ್ತಿಪ್ಪವು. ಆ ಬ್ರಹ್ಮನ ಜಾಗ್ರದಲ್ಲಿ ಪುನಃ ಪ್ರಪಂಚ ಚಕ್ರಕ್ಕೆ ಬೀಳುತ್ತಿರ್ಪವು. ಇಂತು ಜೀವಂಗಳು ಬ್ರಹ್ಮನ ಜಾಗ್ರ ಸ್ವಪ್ನಂಗಳಲ್ಲಿ ಇಪ್ಪತ್ತು ಲಕ್ಷ ವರುಷ ಜನ್ಮವೆತ್ತುತ್ತಿರ್ಪುದೆ ಬ್ರಹ್ಮಗೊಂದು ದಿವಸ. ಅಂಥ ದಿವಸಂಗಳು ಮೂವತ್ತಾರು ಸಾವಿರಮಾದಲ್ಲಿ ಬ್ರಹ್ಮಂಗದೆ ಪರಮಾಯು. ಆ ಬ್ರಹ್ಮನ ಪರಮಾಯುವೆ ವಿಷ್ಣುವಿಗೊಂದು ಸ್ವಪ್ನ. ಅಂತಪ್ಪ ಸ್ವಪ್ನಂಗಳನಂತಮುಳ್ಳ ವಿಷ್ಣುವಿನ ಪರಮಾಯುವೆ ರುದ್ರನಿಗೆ ಗನಿಮಿಷ. ಇಂತು ಅಂತರ ಮಹದಂತರಗಳಲ್ಲಿ ಪಿಪೀಲಿಕಾ ಬ್ರಹ್ಮಪರಿಯಂತವು ಭ್ರಮಿಸುತ್ತಿರ್ಪ ಚಕ್ರಗಳಿಗವಧಿಯಿಲ್ಲದಿರ್ಪುದರಿಂ ಬೀಜ ವೃಕ್ಷ ನ್ಯಾಯದಂತೆ ಕಲಮಲಕ ಜ್ಞಾನಮಾಗಿ ಒಂದೂ ತಿಳಿಯದೆ ತರ್ಕಮುಖಕ್ಕೆ ಬಿದ್ದಳಿವ ಜೀವನಿಗೆ ಮೋಕ್ಷವೆಲ್ಲಿಯದು. ತ್ರಾಸಿನಂದದಿ ಸುನೀತಮಾಗಿರ್ಪ ಚಕ್ರಂಗಳು ಅಧರ್ಮ ಪಿಂಡಮಾದರು ಧರ್ಮದಿಂ ಲಕ್ಷಣ ತೀಕ್ಷ್ಣವಾದರೂ ತನ್ನ ಪ್ರಪಂಚ ಲೀಲೆ ನಷ್ಟಮಪ್ಪುದೆಂಬುದರಿಂ ತನ್ನ ಸಮೀಪದಲ್ಲಿರ್ಪ ನಿಜ ಮಹಿಮಾ ಪುರುಷರ ತತ್ಕಾರ್ಯಕ್ಕೆ ಪ್ರಯೋಗಿಸಲು ಭ್ರಮಾಯುಕ್ತನಾದ ಜೀವನಿಗೆ ತಾವು ಜೀವ ರೂಪದಲ್ಲೆ ಸಾಕ್ಷ್ಯಪ ಸಾಕ್ಷ್ಯಗಳ ತೋರಿಸಿ ಆ ಚಕ್ರಗತಿಗಳು ನ್ಯೂನಾಧಿಕ್ಯಂಗಳಾಗದಂತೆ ಧರ್ಮಾಧರ್ಮಂಗಳ ಸಮಗೊಳಿಸಿ, ತಾವು ಬಂದ ಮಣಿಹಗಳ ತೀರಿಸಿ ತಿರಿಗಿ ಮಹಾಲಿಂಗದಲ್ಲಿ ಬೆರೆವ ಮಹಾಪುರುಷರಿಗಲ್ಲದೆ ಉಳಿದವರ್ಗುಂಟೆ? ಅಂತಪ್ಪ ಪರಮ ಮಂಗಳಮಯ ದಿವ್ಯ ಪುರುಷರ ಚರಣ ಸೇವೆಯಿಂದ ನಾನು ಪರಿಶುದ್ಧನಪ್ಪಂತೆ ಮಾಡಿ ಕೂಡಿ ಸಲಹಾ ಮಹಾಘನ ದೊಡ್ಡ ದೇಶ ಕಾರ್ಯ ಪ್ರಭುವೆ.