Index   ವಚನ - 116    Search  
 
ಪರಮಾತ್ಮನಿಗೆ ಆದಿಯಲ್ಲಿ ಶಿವನೆಂಬ ನಾಮ ನಿಜಮಾದುದೆಂತೆಂದಡೆ: ಶವ ಶಬ್ದಕ್ಕೆ ಪೃಷೋದರಾದಿಯಿಂದಿತ್ವ ಬಂದರೆ ಶಿವಶಬ್ದ. ಶವವೆಂದರೆ ನಿಶ್ಚೆ ತನ್ಯ. ನಿಜಚೇತನವೆ ಪರಮನವಗ್ರಹಿಸಿದಲ್ಲಿ ಪ್ರಪಂಚರೂಪಮಾದ ಪ್ರಕೃತಿ. ನಿಶ್ಚೇತನಮಾಗುತಿರ್ಪುದೆ ಶವ. ಇಂತು ನಿಶ್ಚೇತನಮಾಗಿರ್ಪ ಪ್ರಪಂಚದಲ್ಲಿ ಪರಮನು ಹೊಂದಿದಲ್ಲಿ ಆ ಶವವೇ ಶಿವವಾಯಿತ್ತು. ದರಿದ್ರನಿಗೆ ಧನ ಸಿಕ್ಕಿದರು, ಹೋದ ಒಡವೆ ಕೈಸಾರ್ದರು ಅದೇ ದಿವ್ಯಮಂಗಳ ಶೋಭನವಾದುದರಿಂ ಆ ಶಿವ ಶಬ್ದ ಶೋಭನಾರ್ಥವ ಕೊಡುತ್ತಿಹುದು. ಅದರಿಂ ಪರಮನಿಗೆ ಶಿವನೆಂಬುದನಾದಿ ನಾಮ. ಪ್ರಪಂಚವೆಲ್ಲವು ಕೂಡಿ ಶಿವನಾದಂತೆ, ಪ್ರಜೆಯೆಲ್ಲವು ಕೂಡಿ ದೊರೆಯಾದಂತೆ, ಶಬ್ದವೆಲ್ಲವು ಕೂಡಿ `ಓ' ಎಂಬ ನಾಮವಾಯಿತ್ತು. ಅದು `ನಮ'ವೆಂಬ ಅನುಸ್ವಾರದೊಳಗೆ ಕೂಡಿ ಮಹಾಪ್ರಣವವಾಯಿತ್ತು. ಆ ಪ್ರಣವವನನುಸರಿಸುವುದೆ ಅನುಸ್ವಾರ. ಆ ಪ್ರಣವರೂಪವಾದ ಪರಮನ ಆ ನಮಸ್ಕಾರವನನುಸರಿಸುತ್ತಿರ್ಪುದರಿಂ ನಡುದೊಳಗೆ ಕೂಡಿದ `ಓ'ಕಾರವೇ ಪ್ರಣವ. ಆ ಪ್ರಣವಕ್ಕೆ ಉತ್ಕೃಷ್ಟವಸ್ತುವಿಗೆ ನಮಸ್ಕಾರವೆಂಬುದರ್ಥ. ಆ ಪ್ರಣವವೆ- `ಓಂ' ಎಂದರೆ ನಾನೆಂಬುದರ್ಥ. `ಬಹುಳಂ ಛಂದಸಿತಿ' ಹಕಾರ ಲೋಪಮಾದುದರಿಂದ `ಹಂ' ಎಂದರ್ಥವ ಕೊಡುತ್ತಿರ್ಪುದರಿಂ ಆದಿಯಲ್ಲಿ ಸಾಕಾರರೂಪವಾದ ವಸ್ತು ಪ್ರಣವ ಮುಖದಿ ನಾನುಯೆಂದು ಸಾಕಾರದಿಂ ಶಿವನೆಂಬ ನಾಮವನುಚ್ಚರಿಸುತ್ತಿರ್ಪುದರಿಂ ನಾನೆ ಶಿವನೆಂಬುದರ್ಥ. ಆ ಮಹಾ ಘೋಷನಮಸ್ಕಾರಯೋಗ್ಯಕ್ಕೆ ಸಾಕಾರಮಾದಲ್ಲಿ ಶಿವನೆಂಬ ನಾಮ. ಅಂಥ ಶಿವನಿಗೋಸ್ಕರ ಉತ್ಕೃಷ್ಟ ಘೋಷದಿಂ ನಮಸ್ಕರಿಸುವುದೇ ಪ್ರಣವ. ಪಂಚಾಕ್ಷರಿಮಂತ್ರ ತಾನೆ ಪ್ರಣವಮಾದಲ್ಲಿ ಪ್ರಣವಕ್ಕೆ ನಿಜವೆ ಅರ್ಥ. ನಿಜ ಶೋಭನ ಮಹಿಮೆಯನ್ನು ಸ್ವಕೀಯ ವಾಕ್ಯ ಪ್ರಕಟನದಿಂದ ತಿಳಿಸುತ್ತಿರ್ಪುದರಿಂ ವೇದಂಗಳು ಹುಟ್ಟಿದವು. `ವೇತ್ತೀತಿ ವೇದಾ'ಯೆಂಬುದರ್ಥ. ಅಂತಪ್ಪ ಅನಾದಿ ಮೂರ್ತಿ ಸಂಹಾರಸ್ಥಾನದಲ್ಲಿ ಪೂರ್ವಸಂಹಾರ ಶೇಷರೂಪವಾದುದರಿಂ ಆ ಸಂಹಾರವೆ ಆ ಕಾಲರುದ್ರನಿಗೆ ವಿಭೂತಿಯಾಯಿತ್ತು. ಆ ಶಿವನಿಗೆ ಸಂಹಾರಶಕ್ತಿಯನೀವ ಮಹಿಮೆಯುಳ್ಳುದೆ ಭಸ್ಮ. ಗೋವೆಂದರೆ ಭೂಮಿ. ಆ ಭೂಮಿ ಸಂಹಾರ ಮಲವೆ ಭಸ್ಮ. ಅಂತಪ್ಪ ಭಸ್ಮಕ್ಕೆ ಕಾರಣಮಾಗಿ ಪ್ರಪಂಚ ಸಂಹಾರರೂಪಮಾಗಿ ಸಂಹಾರವೊಂದೆ ಮುಖಮಾಗಿರ್ಪ ಲಲಾಟಾಕ್ಷಿಯೇ ರುದ್ರಾಕ್ಷಿ. ಅಂತಪ್ಪ ಭಸ್ಮ ರುದ್ರಾಕ್ಷಿಗಳಿಂ ಪೂರ್ವವಾಸನೆಯಳಿದು ಪ್ರಣವ ಶಿವಮಂತ್ರದಿಂ ತಾನೆ ಶಿವನಾಗಿರ್ಪ ಕೇವಲ ಕೈವಲ್ಯ ಮಂಗಳಮಯ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ.