Index   ವಚನ - 25    Search  
 
ಪರಮಗುರು ಲಿಂಗಜಂಗಮವ ನಿಜವಿಶ್ವಾಸ ನೈಷ್ಠೆಯೊಳ್ ಮೂರ್ತಿಗೊಳಿಸಿ ಅರ್ಚಿಸುವ ಸುಚಿತ್ತಕಮಲದಳಂಗಳೆಲ್ಲ ಒಂದೊಡಲಾಗಿ, ಭಕ್ತನ ಕರಕಮಲ, ಜಂಗಮದ ಚರಣಕಮಲ, ಈ ನಾಲ್ಕರಲ್ಲಿ ಸಂಬಂಧವಾದ ಪ್ರಣಮದೊಳ್ ಕೂಡಿದ ನೇತ್ರಕಮಲ ಒಂದಾದ, ಸಮರಸೈಕ್ಯವಾಗಿ ಕೂಡಿದ ತ್ರಿಕೂಟಸಂಗಮಸ್ಥಾನವಿದೆ. ಅಷ್ಟಾಷಷ್ಟಿವರಕೋಟಿ ತೀರ್ಥಸ್ಥಾನವಿದೆ. ದೇವಗಂಗೆ ನೀಲಗಂಗೆ ಶಿವಗಂಗಾ ಸರಸ್ವತಿ ಯಮುನಾ ಸ್ಥಾನವಿದೆ. ಚಿತ್ಸೂರ್ಯ ಚಂದ್ರಾಗ್ನಿಮಂಡಲವಿದೆ. ಜ್ಯೋತಿರ್ಮಂಡಲ ಅಖಂಡಜ್ಯೋತಿರ್ಮಂಡಲ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲ ಸ್ಥಾನವಿದೆ. ರೋಷವೆಂಬ ಕಾಲರತಿಕ್ರೀಡಾಭ್ರಾಂತೆಂಬ ಕಾಮ ಆಸೆ ಆಮಿಷ ಲೋಭ ಮೋಹ ಮದ ಮತ್ಸರವೆಂಬ ಮಾಯಾ ಸಂಸಾರಸಂಕಲ್ಪ ವಿಕಲ್ಪಂಗಳ ಹಿಂದುಳಿದು, ಆದ್ಯರು ಭೇದ್ಯರು ವೇದ್ಯರು ಸಾಧ್ಯರುಯೆಂದವತರಿಸಿ, ಜಿಹ್ವಾತುರ ಗುಹ್ಯಾತುರ ಅರ್ಥಾತುರ ತ್ಯಾಗಾತುರ ಭೋಗಾತುರ ಯೋಗಾತುರ ಕಡೆಯಾದ ಅನಂತ ಆತುರಗಳೆಂಬ ಷಡಿಂದ್ರೀಕರಣ ವಿಷಯವ್ಯಾಪಾರಂಗಳ ಜೊಳ್ಳುಮಾಡಿ ತೂರಿ, ಜಗದಾದಿ ಗಟ್ಟಿಬೀಜವಾಗಿ, ನಿಂದ ನಿಲುಕಡೆಯ ಉಳಿದ ಉಳುವೆಯ ಮಹಾಘನದುನ್ಮನಿಸ್ಥಾನವಿದೆ. ಎನ್ನ ಭಕ್ತಿ-ಜ್ಞಾನ-ವೈರಾಗ್ಯ-ಕ್ರಿಯಾಚಾರ ಸತ್ಯಶುದ್ಧ ನಿಜನಡೆನುಡಿಗಳ ಕರುಣಿಸಿ, ಅಂಗ-ಮನ-ಪ್ರಾಣ-ಭಾವ-ಕರಣೇಂದ್ರಿಗಳ ಪಾವನವೆನಿಸಿ ಸಲಹಿದ ಪರಮಾಮೃತಸುಧೆಯಿದೆ. ಭಕ್ತಸ್ಥಲ ವಿರಕ್ತಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ ಶರಣಸ್ಥಲ ಐಕ್ಯಸ್ಥಲ ನಿಃಕಳಂಕಸ್ಥಲ ನಿರ್ಮಾಯಸ್ಥಲ ನಿರಾಲಂಬಸ್ಥಲ ನಿಃಪ್ರಪಂಚಸ್ಥಲ ನಿಜಾನಂದಸ್ಥಲ ನಿರೂಪಾಧಿಕಸ್ಥಲ ನಿರ್ನಾಮಕಸ್ಥಲ ನಿರ್ಗುಣಸ್ಥಲ ಸಗುಣಸ್ಥಲ ನಿತ್ಯತೃಪ್ತಸ್ಥಲ ಕಾಯಾರ್ಪಣಸ್ಥಲ ಕರಣಾರ್ಪಣಸ್ಥಲ ಭಾವಾರ್ಪಣಸ್ಥಲ ಪರಿಪೂರ್ಣಾರ್ಪಣಸ್ಥಲ ನಿರವಯಸ್ಥಲವೆ ಕಡೆಯಾದ ಏಕವಿಂಶತಿ ದೀಕ್ಷಾನುಭಾವ ಏಕವಿಂಶತಿ ಯುಗಂಗಳನೊಳಗೊಂಡು ಅಣುವಿಂಗೆ ಪರಮಾಣುವಾಗಿ, ಮಹತ್ತಿಂಗೆ ಘನಮಹತ್ತಾಗಿ, ಸೃಷ್ಟಿ ಸ್ಥಿತಿಲಯಂಗಳಿಗೆ ಕಾರಣಾರ್ಥ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಪರಮಾನಂದ ಪಂಚಪರುಷದ ಖಣಿಯಿದೆಯೆಂದು ಪೂರ್ಣಾನುಭಾವಭರಿತವಾದ ನಿರ್ದೇಹಿಗಳೆ ನಿರವಯಪ್ರಭು ಮಹಾಂತಘನವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.