ಇಂತೆಂಬ ಭಕ್ತ ಜಂಗಮಸ್ಥಲದ ಆದಿ ಅನಾದಿಯನರಿದು,
ಮಾಯಾಭೋಗ ಮರೆದು, ಜಂಗಮಾರಾಧನೆಯಂ ಮಾಡಿ,
ಘನಪಾದತೀರ್ಥವ ಪಡಕೊಂಬುವ ಶಿವಶರಣನು
ಅನಿಮಿಷಾವಲೋಕನ ಪೂರ್ಣದೃಷ್ಟಿಯಿಂದ
ಚಿತ್ಸೂರ್ಯ ಜ್ಯೋತಿರ್ಮಂಡಲಸಂಬಂಧವಾದ
ಬಲದಂಗುಷ್ಠದ ಮೇಲೆ ಚತುರಂಗುಲಿಪ್ರಮಾಣದಿಂದ
ಬಿಂದು ಬಿಂದುಗಳದುರಿದಂತೆ ನೀಡುವಾಗ,
ಆ ಸ್ಥಾನದಲ್ಲಿ ತನ್ನ ದೀಕ್ಷಾಗುರು ಇಷ್ಟಲಿಂಗಮೂರ್ತಿಯ ಧ್ಯಾನಿಸುವುದು.
ಅಲ್ಲಿ ನಾದ ಬಿಂದು ಕಳೆ ಚಿನ್ನಾದ ಬಿಂದು ಕಳೆಗಳ
ದೀರ್ಘಬಿಂದುಗಳು ಕೂಡಿದಲ್ಲಿ ಮೂಲಷಡಕ್ಷರವೆನಿಸುವುದು.
ಆ ಷಡಕ್ಷರಂಗಳ ಆರುವೇಳೆ ಘನಮನಮಂತ್ರವಾಗಿ
ಅಲ್ಲಿಂದ ಚಿಚ್ಚಂದ್ರ ಅಖಂಡ ಜ್ಯೋತಿರ್ಮಂಡಲಸಂಬಂಧವಾದ
ಎಡದಂಗುಷ್ಠದಮೇಲೆ ಮೊದಲಂತೆ ನೀಡುವಾಗ,
ಆ ಸ್ಥಾನದಲ್ಲಿ ತನ್ನ ಶಿಕ್ಷಾಗುರು ಪ್ರಾಣಲಿಂಗಮೂರ್ತಿಯ ಧ್ಯಾನಿಸುವುದು.
ಅಲ್ಲಿ ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಪಂಚಾಕ್ಷರದೊಳು
ದೀರ್ಘಬಿಂದು ಕೂಡಲಾಗಿ ಪರಮಪಂಚಾಕ್ಷರವೆನಿಸುವುದು.
ಆ ಪರಮಪಂಚಾಕ್ಷರವು ಐದು ವೇಳೆ ಮನಮಂತ್ರಧ್ಯಾನವಾಗಿ
ಅಲ್ಲಿಂದ ಚಿದಗ್ನಿ ಅಖಂಡಮಹಾಪರಿಪೂರ್ಣ ಜ್ಯೋತಿರ್ಮಂಡಲ ಸಂಬಂಧವಾದ
ಉಭಯಾಂಗುಷ್ಠಮಧ್ಯದಲ್ಲಿ ನೀಡುವಂತೆ ನೀಡುವಾಗ್ಗೆ,
ಆ ಸ್ಥಾನದಲ್ಲಿ ತನ್ನ ಮೋಕ್ಷಗುರು
ಅನಾದಿಭಾವಲಿಂಗಮೂರ್ತಿಯ ಧ್ಯಾನಿಸುವುದು.
ಅವಿರಳಮೂರ್ತಿ ಪರಾತ್ಪರ ಜ್ಯೋತಿರ್ಮಯ
ಅಖಂಡಜ್ಯೋತಿರ್ಮಯ ಅಖಂಡ ಮಹಾಜ್ಯೋತಿರ್ಮಯ
ನಿತ್ಯತೃಪ್ತ ನಿಃಕಳಂಕ ನಿಶ್ಶೂನ್ಯ ನಿರಾತಂಕವೆಂಬ
ನವಮಾಕ್ಷರದೊಳಗೆ ದೀರ್ಘಬಿಂದು ಕೂಡಲಾಗಿ,
ಅನಾದಿಮೂಲದೊಡೆಯ ನವಪ್ರಣಮಮಂತ್ರವೆನಿಸುವುದು.
ಆ ಪ್ರಣಮಂಗಳಂ ಒಂದೆವೇಳೆ
ಪರಿಪೂರ್ಣ ನಿಜದೃಷ್ಟಿಯಿಂದ ಉನ್ಮನಘನಮಂತ್ರವೆ ಧ್ಯಾನವಾಗಿ
ಅಲ್ಲಿಂದ ಮಿಳ್ಳಿಯ ಮುಚ್ಚಿಟ್ಟು ದ್ರವವನಾರಿಸಿ,
ನಿರವಯತೀರ್ಥವ ನಿರವಯಲಿಂಗಜಂಗಮಕ್ಕೆ
ಸ್ಪರಿಶನತೃಪ್ತಿಯ ಸಮರ್ಪಿಸಿದ ಪರಿಣಾಮತೃಪ್ತರೆ
ನಿರವಯಪ್ರಭು ಮಹಾಂತರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.