Index   ವಚನ - 40    Search  
 
ಶ್ರೀಗುರುಕರುಣಕಟಾಕ್ಷೆಯಿಂದ ತಮ್ಮ ತಾವರಿದ ನಿತ್ಯಮುಕ್ತ ನಿಜೋತ್ತಮ ಸದ್ಭಕ್ತ ಮಹೇಶ್ವರರು, ಹಿಂದೆ ಹೇಳಿದ ಬಹಿರಂಗ ಪಂಚಪಾತಕಮಂ ನಿರಸನಂಗೈದು ಮಾರ್ಗಕ್ರಿಯೆ ಶುದ್ಧರೆನಿಸಿ, ಅಂತರಂಗದ ಗುಪ್ತಪಾತಕಮಂ ನಿರಸನಗೈವ ವಚನಸೂತ್ರವದೆಂತೆಂದೊಡೆ: ತನಗುಳ್ಳ ಗಂಧ ರಸ ಮೊದಲಾದ ಸುಪದಾರ್ಥದ್ರವ್ಯಗಳ ಗುರು ಚರ ಪರ ಸ್ಥಿರ ತಂದೆ ತಾಯಿ ಘನಲಿಂಗ ಸಮ್ಮೇಳಕ್ಕೆ ಮಾಡದೆ ನಿರವಯಪರಿಪೂರ್ಣ ನಿರಂಜನ ಗುರುಲಿಂಗಜಂಗಮ ಪ್ರಸನ್ನೋದಯವಾದ ಚಿತ್ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮಹಾಮಂತ್ರ ಕೊನೆಮೊನೆಯಲ್ಲುದಯವಾದ ಮಹದರಿವು ಮಹಾಜ್ಞಾನ ಮಹಾನುಭಾವಾಚಾರ ಸಂಬಂಧದಾಚರಣೆಗಳೆ ಕೇವಲ ಎನ್ನ ಜನನಾಂಕುರದ ಮುಕ್ತಿದ್ವಾರವಾಗಿರುವ ಸ್ಥಿತಿಯ ಗೊತ್ತಿನ ಹಕ್ಕೆ, ನಾ ನಿರವಯಲಾಗುವ ಲಯಸ್ಥಾನದ ಉಳುವೆಯ ಮಹಾಮನೆಯೆಂದು ಭಾವಭರಿತವಾಗಿ ಹಿಂದುಮುಂದಣ ಫಲಪದದ ಭೋಗಮೋಕ್ಷದಾಪೇಕ್ಷೆಗಳಂ ನೆರೆನೀಗಿ, ಬಯಲಬ್ರಹ್ಮದಿರವ ಹೊದ್ದಲೊಲ್ಲದೆ ಪಾಪದ ಪುಂಜ, ಕರ್ಮದೋಕುಳಿ, ಮಲದಾಗರ, ಅನಾಚಾರದಕ್ರಿಯೆ, ಅಜ್ಞಾನ ವಿಷಯಾತುರದ ಭವಜೀವಿಗಳಾಗಿರುವ ಪರಮಪಾತಕರ ಮೋಹವಿಟ್ಟು, ನನ್ನ ಪೂರ್ವಾಶ್ರಯವೆಂದು, ಅತಿ ಪ್ರೇಮದಿಂದ ತನುಮನಧನವ ಸವೆದು, ಅವರೊಡಗೂಡಿ ತೀರ್ಥಯಾತ್ರೆಗಳಂ ಮಾಡಿ, ತಾ ಸ್ವೀಕರಿಸಿದ ಪ್ರಸಿದ್ಧಪ್ರಸಾದ ಪಾದೋದಕ ಪ್ರಸಾದಮಂ ಆ ತ್ರಿವಿಧ ದೀಕ್ಷಾಚಾರಹೀನವಾದ ಭೂಪ್ರತಿಷ್ಠಾದಿಗಳಿಗೆ ಕೊಟ್ಟು ಕೊಂಬುವ ಭ್ರಷ್ಟ ನಡಾವಳಿಯೆ ಅಂತರಂಗದ ಪ್ರಥಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.