Index   ವಚನ - 57    Search  
 
ಇವೈದು ಬಹಿರಂಗದ ಮನೆಸಂಬಂಧವಾದ ನರರಾಲಯಗಳಲ್ಲಿ ವರ್ತಿಸಿ ಲಿಂಗಾಂಗಸಂಬಂಧಿಗಳಲ್ಲಿ ವಿಸರ್ಜನೆಯಾದ ಸೂತಕಗಳ ಕಂಡಣೆಯ ಹರಗುರುವಾಕ್ಯಪ್ರಮಾಣು. ಇನ್ನು ತನ್ನ ತಾನರಿದ ಲಿಂಗದೇಹಿಗಳು ವಿಸರ್ಜಿಸಿ ಬಿಡುವ ನರಗುರಿಗಳಾದ ನಾಮಧಾರಕರ ಕರಣೇಂದ್ರಿಗಳಲ್ಲಿ ವರ್ತಿಸುವ ಪಂಚಸೂತಕಂಗಳು ಅವಾವೆಂದಡೆ : ಶ್ರೀ ಗುರುಪರಮಾರಾಧ್ಯ ದೀಕ್ಷಾಕರ್ತನ ಕರುಣಕಟಾಕ್ಷೆಯಿಂದ ಚಿದ್ಘನಮಹಾನಿಜೇಷ್ಟಲಿಂಗಜಂಗಮ ಜಂಗಮಲಿಂಗ ಬಾಹ್ಯಾಂತರಂಗಳಲ್ಲಿ ಮೂರ್ತಿಗೊಂಡು ಬೆಳಗುವ ಚಿಜ್ಜ್ಯೋತಿಯ ಕೂಟಸ್ಥವಿಲ್ಲದೆ ಸ್ತ್ರೀಯಳೆಂಬ ಜಡವನಿತೆಯ ರತಿಕ್ರೀಡಾದಿ ವಿಲಾಸದ ಭವಕೂಪದಲಿ ಜಾರಿಬಿದ್ದು ಭೌತಿಕರ ಸಾನ್ನ ಪಾನಗಳಿಂದ ಸೇವಿಸಿದಲ್ಲಿ ಆದಿ ವ್ಯಾಧಿಗಳು ಬಂದು ಪೀಡಿಸುತಿರ್ಪವು. ಆ ಆದಿ ವ್ಯಾಧಿಗಳಿಗೆ ಅಂಜಿ, ಹರಿಯೆ ಮೊರೆಯೊಯೆಂದು ಗುರುಮಾರ್ಗಾಚಾರವ ಬಿಟ್ಟು, ತನುವಿನಿಚ್ಛೆಗೆ ಚರಿಸಿ, ಜಡಶರೀರಿಗಳಾಗಿ, ಸಂದೇಹದಿಂದ ಸಂಕಲ್ಪ-ವಿಕಲ್ಪ ಮುಂದುಗೊಂಡು ನರಗುರಿಗಳಂತೆ ಕ್ರಿಯಾಚಾರ ನಡೆನುಡಿಗಳ ಸೇರಲಾರದೆ ಗಾಢಾಂಧಕಾರ ಕಾವಳ ಮುಸುಕಿ ತನ್ನ ತಾನೇಳಲಾರದೆ, ಈ ದೇಹಸಂಸಾರ ಭೋಗಾದಿ ರತಿಕೂಟಂಗಳೆಲ್ಲ ಪರಶಿವನಪ್ಪಣೆಯಿಂದ ಬಂದ ಪರಿಣಾಮಪ್ರಸಾದವೆಂದು ನಿಜವಾಗಿ ಹಸಿವು ತೃಷೆ ನಿದ್ರೆ ಸಿರಿ ದರಿದ್ರ ಭೋಗ ರೋಗಂಗಳು ಸಮಗಾಣಲಾರದೆ ಸುಖಸ್ತುತಿ ಲಾಭಕ್ಕೆ ಹಿಗ್ಗಿ, ದುಃಖದ ನಿಂದ್ಯನಷ್ಟಕ್ಕೆ ತಗ್ಗಿ, ಕಂದಿ ಕುಂದಿ, ಎನ್ನ ದೇಹದ ದುರ್ಗುಣಂಗಳು ಗುರುವಿನಿಂದ ಹೋಗವು, ಲಿಂಗದಿಂದ ಹೋಗವು, ಜಂಗಮದಿಂದ ಹೋಗವುಯೆಂದು, ಸಂದೇಹದಿಂದ ಗುರುಭಕ್ತಿಯನುಳಿದು ಲಿಂಗಪೂಜೆಯನುಳಿದು, ಜಂಗಮದಾಸೋಹವ ಬಿಟ್ಟು, ಶಿವಗಣಂಗಳ ಪರಮಾನುಭಾವವ ಮರೆದು, ತನುವಿನಿಚ್ಛೆಗೆ ನಡೆದು, ತನುವಿನಿಚ್ಛೆಗೆ ನುಡಿದು, ತನುವಿನಿಚ್ಛೆಗೆ ಭೋಗಿಸಿ, ದುರಾಚಾರಸಂಗಸಮರತಿಯಿಂದ ಪ್ರಮಥಗಣಂಗಳ ಲೇಸು ತೊಲಗಿ, ಅರ್ಥಪ್ರಾಣಾಭಿಮಾನದ ಕುಂದುಕೊರತೆಗೊಳಗಾಗಿ ಭವದತ್ತ ಮುಖವಾಗಿ, ಅಧೋಕುಂಡಲಿಸರ್ಪನಂ ತೆಗೆದು ಜೀವಿಯಾಗಿರ್ಪುದೆ ಪ್ರಥಮದಲ್ಲಿ ತನ್ನ ಅಂತರಂಗದ ತನುಸೂತಕವೆಂಬೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.