Index   ವಚನ - 59    Search  
 
ಮನಕ್ಕೆ ಮಂಗಳವಾಗಿ ಚೇತನಕೃತಿಯಿಂದ ವಿರಾಜಿಸುವ ಪ್ರಾಣಸೂತಕವದೆಂತೆಂದೊಡೆ ವಿಚಾರ: ಶ್ರೀಗುರುಘನಗಂಭೀರ ಮೋಕ್ಷಕರ್ತನ ಕರುಣಕಟಾಕ್ಷೆಯಿಂದೆ ಅಣುವಿಂಗಣು ಮಹತ್ತಿಂಗೆ ಮಹತ್ತಾಗಿ ಪರಿಶೋಭಿಸುವಂತೆ ಚಿದ್ಭ್ರಹ್ಮವ ಒಳಹೊರಗೆನ್ನದೆ ಸಾಕಾರ ನಿರಾಕಾರ ಆಚರಣೆಸಂಬಂಧಗಳಿಂದ ತುಂಬಿ ತುಳುಕಾಡುತ್ತ ಲಿಂಗನಡೆ ಲಿಂಗನುಡಿ ಲಿಂಗದೃಢ ಲಿಂಗರತಿ ಲಿಂಗಗತಿಮತಿ, ಲಿಂಗಾಂಗಸಂಗಸಮರಸಕೂಟದಭಿಮುಖ ಲಿಂಗಾಭಿಮಾನ, ಲಿಂಗಭೋಗೋಪಭೋಗಂಗಳೊಳ್ ತಾನೆ ತಾನಾಗಿರ್ಪ ಶಿಯೋಗೀಶ್ವರನು. ಸ್ಥೂಲಸೂಕ್ಷ್ಮವಾದ ವಿಸರ್ಜನೆ ಬಂದೊದಗಿದ ಸಮಯದಲ್ಲಿ ವಿಸರ್ಜಿಸಿ ಪ್ರಕ್ಷಾಲ್ಯದಿಂದ ಶುಚಿರ್ಭೂತನಾಗಿ, ಪರಿಣಾಮೋದಕವ ಶೋಧಿಸಿ, ಪವಿತ್ರತೆಯಿಂದ ಹನ್ನೆರಡು ವೇಳೆ ಪ್ರಕ್ಷಾಲನಂಗೈದು ದಂತಪಂಕ್ತಿಗಳ ತೀಡಿ, ಮುಕ್ಕುಳೋದಕದಿಂದ ಪರಿಣಾಮಿತನಾಗಿ, ಒಂದನೇ ವಿಸರ್ಜಿಸಿದಲ್ಲಿ ಉದಕವು ಬಳಸಿ ಪರಿಣಾಮವಾಗಿ, ಭಾಂಡವಾದರೆ ಬೆಳಗಿ, ಪಾವುಡವ ತೊಳೆದು ಒಣಹಾಕಿ, ಹಸ್ತಪಾದವ ತೊಳೆದು, ಪವಿತ್ರೋದಕದಿಂದ ಆರುವೇಳೆ ಗಂಡೂಷಮಂ ಮಾಡಿ ಜಿಹ್ವೆಯ ತೊಳೆದು, ತದನಂತರದಲ್ಲಿ ಹರಗುರುಸ್ಮರಣೆಯಿಂದ ಸುಗಂಧಯುಕ್ತವಾದ ಹಣ್ಣು ಕಾಯಿಗಳ ಕೊಯಿದು ಖಂಡ್ರಿಸಿ, ಭ್ರಮರಾದಿಗಳುಳಿದು ಗುರುಚರಗಣಾರಾಧ್ಯರಿಗೆ ಕೆಲವು ಕೊಟ್ಟು ಶರಣೆಂದು, ಉಳಿದಂಥವ ತಮ್ಮ ಗೃಹಕ್ಕೆ ತರುವಂಥದೇ ಮಾರ್ಗಾಚರಣೆಯ ಕ್ರಿಯಾಚಾರದಿರವೆಂದುದು. ಇದಲ್ಲದೆ ಸ್ಥೂಲ ಸೂಕ್ಷ್ಮವ ವಿಸರ್ಜಿಸಿ ತನಗೆ ಜರೂರು ಇದ್ದರೆ ತಂಬಿಗೆ ಹಸ್ತಪಾದವ ಮೃತ್ತಿಕಾಶೌಚದಿಂದ ಪ್ರಕ್ಷಾಲನಂಗೈದು ನಿರ್ಮಲವೆನಿಸಿ, ಶ್ರೀಗುರುಲಿಂಗಜಂಗಮದ ನೆನಹು ನಿರ್ಧಾರವಾಗಿ ನಿಂದ ಭಕ್ತಮಹೇಶ್ವರರು ಜಿಹ್ವಾಗ್ರದಲ್ಲಿ ಚರಿಸುವ ಪರಮಾನಂದಜಲವ ತೂಪಿರಿಸುತ್ತ, ಸುಗಂಧರಸದ್ರವ್ಯಂಗಳ ಕ್ರಿಮಿಕ್ರಿಮಿಗಳ ಖಂಡ್ರಿಸಿ ಎಂಜಲವನುಳಿದು ಸುಚಿತ್ತ ಹಸ್ತದಿಂದೆತ್ತಿಕೊಂಬುವುದೆ ಆಚರಣೆಯೊಳಗಿನ ಸಂಬಂಧವ ಮೀರಿದ ಕ್ರಿಯಾಚರಣೆಯೆನಿಸಿತ್ತು. ಗಣಾರಾಧ್ಯರಿಗೆ ಈ ನಿರ್ಣಯಗಳನರಿಯದೆ ತಾ ನಿರ್ಮಲ ಪರಿಪಕ್ವವಾದ ವರ್ಮಾದಿವರ್ಮಗಾಣದೆ ಸ್ಥೂಲಸೂಕ್ಷ್ಮವ ವಿಸರ್ಜಿಸಿ, ಹಸ್ತಪಾದವ ತೊಳೆದು, ತಂಬಿಗೆಯ ಬೆಳಗಿಕೊಂಡು ಬರುವ ಪಥದಲ್ಲಿ ಸುರಸದ್ರವ್ಯವಂ ಕಂಡು ಕ್ರಯ ವಿಕ್ರಯವ ಮಾಡಿ, ಸೆರಗಿನಲ್ಲಿ ಕಟ್ಟಿ, ಬರುವಷ್ಟರೊಳಗೆ ಸುಗಂಧಯುಕ್ತವಾದ ಪುಷ್ಪ ಪತ್ರಿಗಳ ಕಂಡು, ಅತಿಮೋಹವಿಟ್ಟು, ಸಂಭ್ರಮದಿಂದ ನಿಂದು, ಜಿಹ್ವಾಗ್ರವ ತೊಳೆಯಲಿಲ್ಲವುಯೆಂದು ಸಂಕಲ್ಪದಿಂದ ಭ್ರಾಂತುಭ್ರಮೆಚಿತ್ತನಾಗಿ, ಅಂತರಂಗದಲ್ಲಿ ಬಿಡಲಾರದ ಅತಿಯಾಸೆ, ಕೇಳಲಾರದ ಸಂಶಯಗಳಿಂದ ತೊಳತೊಳಗಿ ಹೊಯಿದಾಡುತಿರ್ಪುದೆ ತೃತೀಯದಲ್ಲಿ ಮನದೊಳಗಣ ಅಂತರಂಗದ ಪ್ರಾಣಸೂತಕ ಕಾಣಾ ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.