Index   ವಚನ - 76    Search  
 
ಅನಾದಿ ಪ್ರಮಥಗಣ ನಿಜೋಪದೇಶ ಪ್ರಸನ್ನ ಪ್ರಸಾದಾಚಾರ ನಡೆನುಡಿಸಂಬಂಧಗಳಾಚರಣೆಗಳ ಬಳಿವಿಡಿದು ಮುಕ್ತಿಸ್ವರೂಪರಾದ ಘನಗುರುಚರಮೂರ್ತಿಗಳು ಪ್ರಥಮದಲ್ಲಿ ಗುರುಕರುಣ ಲಿಂಗಧಾರಣಸ್ಥಲವಳವಟ್ಟು ಲಿಂಗನಡೆ ಲಿಂಗನುಡಿಯಾಗಿ ಪಾತಕಸೂತಕವಳಿದುಳಿದು ನಿಜೋತ್ತಮಂಗೆ ಕ್ರಿಯೋಪದೇಶದಿಂದ ಶುದ್ಧಪ್ರಸಾದವ ಕೊಟ್ಟ ಮಂತ್ರೋಪದೇಶದಿಂದ ಸಿದ್ಧಪ್ರಸಾದವ ಕೊಟ್ಟು ವೇದೋಪದೇಶದಿಂದ ಪ್ರಸಿದ್ಧಪ್ರಸಾದವ ಕೊಟ್ಟು, ಇವ ಮೂರು ಸ್ಥಲವಿದ್ದವರಲ್ಲಿ ಕೊಳಬಲ್ಲಾತನೆ ಅನಾದಿಪ್ರಮಥಗಣ ಗುರುಮಾರ್ಗಿಕರೆನಿಸುವರು ನೋಡಾ. ಇವರನರಿಯದೆ ಕ್ರಿಯಾದೀಕ್ಷೆ, ಶುದ್ಧಪ್ರಸಾದದೀಕ್ಷೆ ಪಾದೋದಕ ಮಂತ್ರದೀಕ್ಷೆ ಸಿದ್ಧಪ್ರಸಾದ ಶಿಕ್ಷಾಪಾದೋದಕದಿರವನರಿಯದೆ ತನು ಶುದ್ಧ ಮನ ಸಿದ್ಧವಿಲ್ಲದೆ, ವೇದಾದೀಕ್ಷೋಪದೇಶ ಪ್ರಸಿದ್ಧಪ್ರಸಾದ ಜ್ಞಾನಪಾದೋದಕದಲ್ಲಿ ಸಮರಸನಾಚರಿಸುವಾತನ ಯೋಗ್ಯನೆಂಬೆ ನೋಡಾ. ಪ್ರಸಿದ್ಧ ಪಾದೋದಕ ಪ್ರಸಾದ ಮಂತ್ರವರಿಯದ ಲಿಂಗಲಾಂಛನಧಾರಿಗಳಿಂದ ಷಟ್ಸ್ಥಲಬ್ರಹ್ಮೋಪದೇಶ ಪಡೆದರೆಂದು ಭಕ್ತನಾಗಿ, ಹತ್ತು ಹನ್ನೊಂದರ ಪ್ರಸಾದಿಗಳೆಂದು, ಸತ್ಕ್ರಿಯೆ ಸಮ್ಯಜ್ಞಾನಾಚಾರದ ಇರವನರಿಯದೆ, ಸಮರಸದ ಕ್ರಿಯೆಗಳ ಬಳಸಿ ಉದರವ ಹೊರೆವಾತನಯೋಗ್ಯ ನೆಂಬೆನು ನೋಡಾ. ಮಲಮೂತ್ರ ವಿಸರ್ಜಿಸಿ, ಸ್ನಾನವಿಲ್ಲದೆ, ಅನ್ನುದಕ ಹಣ್ಣು ಫಲಾದಿ ಕಬ್ಬು ಕಡಲೆಗಳೆಂದು ಕೈಗೆಬಂದಂತೆ ತಿಂದು ತೇಗಿ, ಪ್ರಸಾದಿಯೆಂದು, ತೀರ್ಥವ ಸಲಿಸಿ, ಪ್ರಸಾದವ ಮರೆದೆನೆಂದು ಮತ್ತೆ ತೀರ್ಥಪ್ರಸಾದವೆಂದು ಕೊಡುಕೊಂಬರಿವರು. ಚಿದ್ಘನಲಿಂಗಾಂಗಸಂಗವೇ ಪರಿಪೂರ್ಣಾನಂದ ತೀರ್ಥಪ್ರಸಾದವೆಂದರಿಯದವರು ಬಿಂದು ಚಿದ್ಬಿಂದು ಪರಬಿಂದುವ ಅಯೋಗ್ಯಪರಮುಖದಲ್ಲಿ ಚೆಲ್ಲಾಡುವವರು ಚರ್ಮಾಸನ ಚರ್ಮದಲ್ಲಿಟ್ಟಂಥ ರಸದ್ರವ್ಯ ಲಿಂಗಾಭಿಷೇಕ ಪಾದಾಭಿಷೇಕ ಪಂಚಾಮೃತ ಪಂಚಕಜ್ಜಾಯ ಪರಮಾನ್ನ ಫಲಹಾರವೆಂದು ಆಡಂಬರವ ಹರಹಿ, ಲಿಂಗಾರ್ಚನೆ ನೈವೇದ್ಯ ಪಾದಪೂಜೆಯ ನೈವೇದ್ಯ ಭುಂಜಿಸಿ, ಮತ್ತೆ ನಾಚಿಕೆಯಿಲ್ಲದೆ ಭಕ್ತಜಂಗಮ ಪ್ರಸಾದಿಗಳೆಂಬವರು, ಹೋಮ ನೇಮ ಭಸ್ಮಯಜ್ಞಾದಿ ಕೃತ್ಯವ ಮಾಡಿ ಅಮಲು ಮೊದಲಾದ ಲಾಹರಿಭುಂಜಕರು, ಮಂತ್ರ ತಂತ್ರ ಯಂತ್ರ ಶಕುನ ವೈದ್ಯಗಾರರು ದ್ವಿನೇತ್ರ ಪ್ರಕಾಶದೊಳಗಣ ಕುರುಹಿನರುಹನರಿಯದವರು, ಅಪಾದಮಸ್ತಕ ಪರಿಯಂತರ ಸತ್ಪ್ರಾಣಿಸಿಕೊಂಡಿರ್ಪನಿಜವನರಿಯದವರು, ಗುರುಚರಪರಗಣ ಸನ್ಮಾನಿಗಳ ಆಜ್ಞೆಯ ಮೀರಿ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಬಾಹ್ಯರೆಂಜಲ ನುಡಿನಡೆಯ ವ್ಯವಹಾರಿಗಳ ಯೋಗ್ಯರಯೋಗ್ಯರೆಂದು ಗಣಸಾಕ್ಷಿಯಾಗಿ ಗುರುನಿರೂಪಣದಿಂದ ಡಂಗುರವ ಸಾರಿದೆ ಸಾರಿದೆ ಸಾರಿದೆ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.