Index   ವಚನ - 97    Search  
 
ಪರಮಪವಿತ್ರ ಭಕ್ತೋಪಕಾರ ನಿಜವೀರಶೈವೋದ್ಧಾರಕ ನಿಜವಿರತಿ ಕೌಪ ಕಟಿಸೂತ್ರ ಕಂತೆ ಕಮಂಡಲ ಮೊದಲಾದ ಲಾಂಛನ ಪರಿಪೂರಿತ ಷಟ್ಸ್ಥಲೋಪದೇಶ ಮಾರ್ಗೋದ್ಧಾರಕ, ಸದ್ಭಕ್ತಿಜ್ಞಾನಾಚಾರ ಕ್ರಿಯಾನುಭಾವ ನಿಜವೈರಾಗ್ಯಯೋಗಾನಂದಭರಿತೋಲ್ಲಾಸ, ಸತ್ಯಶುದ್ಧ ನಡೆನುಡಿ ದೃಢಚಿತ್ತಸ್ವಯಚರ ಪರಸ್ಥಲಕಾರಣವತಾರ್ಯರಾಗೊಪ್ಪುವಂಥ ನಿಜಜಂಗಮಲಿಂಗಮೂರ್ತಿಗಳಾಚರಿಸಿ, ಮೂರ್ತಿಸ್ವರೂಪರಾಗಿ ನಿಂದನಿಲುಕಡೆಯೆಂತೆಂದೊಡೆ: ಸ್ವಯಸ್ಥಲ ಚರಸ್ಥಲ ಪರಸ್ಥಲವನೊಳಕೊಂಡೊಪ್ಪುವ ಶಕ್ತಿಸಮೇತರಾದ ಘನಲಿಂಗಜಂಗಮಮೂರ್ತಿಗಳಾದರು. ಕ್ರಿಯಾಶಕ್ತಿವಿರಹಿತರಾದ ಪಟ್ಟದದೇವರು ಅತೀತ ಚರಮೂರ್ತಿಗಳಾದರು. ಆ ಶಕ್ತಿಸಮೇತವಾದ ಚತುರಾರಾಧ್ಯರು ಲಿಂಗಧಾರಣಸ್ಥಲ ಶಂಖ ಗಿಳಿಲುವಿಡಿದ ಗುರುಸ್ಥಲ, ದಂಡಾಗ್ರ ಗಿಳಿಲುವಿಡಿದ ಅತೀತಸ್ಥಲದ ದೀಕ್ಷಾರ್ಚನಸ್ಥಲ ಮೊದಲಾದ ತ್ರಿವಿಧಸ್ಥಲವ ಬಿಡುಗಡೆಯುಳ್ಳ ವಿರಕ್ತಿಸ್ಥಲವಿಡಿದವರಾದರು. ಚತುರ್ವಿಧಸ್ಥಲದಿಂದ ಆಚರಿಸುವ ಜಂಗಮಮೂರ್ತಿಗಳು ಭಕ್ತರ ವಿಶ್ವಾಸದಿಂದ ದಾಸೋಹನಿಮಿತ್ಯಾರ್ಥವಾಗಿ ಲಿಂಗಮುದ್ರಾಭೂಮಿಯೆನಿಸಿ ಮಠಮನೆಗಳ ಮಾಡಿದವರಾಗಲಿ, ಪಂಚಮುದ್ರೆಗಳ ಧರಿಸಿ ನೂರಾರುಮೂರ್ತಿಗಳೊಡಗೂಡಿ, ವಾಹನಾದಿ ಸಾಹಿತ್ಯಮಾನದಿಂದ ಗ್ರಾಮಾನುಗ್ರಾಮಕ್ಕೆ ಉತ್ಸಾಹದಿಂದ ದುಷ್ಟನಿಗ್ರಹ ಶಿಷ್ಟಪ್ರತಿಪಾಲನೆಯ ಮಾಡಿ, ಆಚಾರೋದ್ಧಾರಕ ಗುರುಮಾರ್ಗವಿಡಿದ ಗುರುಸಾಂಪ್ರದಾಯಕರು, ತೀರ್ಥಪ್ರಸಾದ ಸ್ಥಲಸಂಬಂಧ ಕೊಡುಕೊಂಬುವ ತ್ರಿವಿಧದೀಕ್ಷೋಪಕಾರಣಿಕರೆಲ್ಲ ತಮ್ಮ ಸ್ಥಲಸ್ಥಲವಿದ್ದಂತೆ ಕರ್ತೃಭೃತ್ಯಸ್ಥಲದ ವರ್ಮಾದಿವರ್ಮವರಿದು, ಭಕ್ತಿಜ್ಞಾನವೈರಾಗ್ಯ ಕೀಲ ತಿಳಿದು, ನಡೆನುಡಿ ಒಂದಾಗಿ, ಅಂತರ್ಜ್ಞಾನ ಬಹಿಃಕ್ರಿಯಾ ಹೋದಲ್ಲದೆ ಸಪ್ತವಿಧಭಕ್ತಿಗಳಿಂದ ಸಾವಧಾನವಿಡಿದು, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲವಾಚರಿಸುವುದು, ಸತ್ಯಶುದ್ಧಸನ್ಮಾರ್ಗರ ನಡೆಯುಳ್ಳವರೆ ನಮ್ಮ ಪರಿಪೂರ್ಣಪ್ರಸಾದಿಗಳೆನಿಸುವರು. ಗುರುಲಿಂಗಜಂಗಮವು ಅಲ್ಲವಾದಡೆ, ಷಡುಸ್ಥಲಮಾರ್ಗಕ್ಕೆ ಸಲ್ಲರೆಂಬುವುದೆ ಹರಗುರುವಾಕ್ಯ ಪ್ರಮಾಣವು. ಅದೇನು ಕಾರಣವೆಂದಡೆ: ತಮ್ಮ ಮೂಲಚಿತ್ತುವಿನ ಕೊನೆಮೊನೆಯ ಮೇಲೆ ಉದಯವಾದ ಅಚ್ಚಪ್ರಸಾದಿಗಳು ನಿಚ್ಚಪ್ರಸಾದಿಗಳು ಸಮಯಪ್ರಸಾದಿಗಳು ಅದರಿಂದ ಎಲ್ಲಿ ಜನನವಾದಂಥಾದೆಲ್ಲ ಅದೇ ಬೆಳೆಯಾಗಿ ಲಯವಾಗಬೇಕೆಂಬ ದೃಷ್ಟವನರಿದು ಭಕ್ತಗೆ ಸಲ್ಲುವದು. ತಮಗೆ ಬೇಕಾದಂಥದ ಕೊಂಬೆವು, ನಮಗೇತರ ಶೀಲ ವ್ರತಾಚಾರ ನೇಮ ನಿತ್ಯವೆಂದು ಪ್ರಸಾದ ಪಾದೋದಕ ಪ್ರಸಿದ್ಧಪ್ರಸಾದಸೇವಿತರೆಂದು ನಡೆಗೆಟ್ಟ ನುಡಿಯ ನುಡಿದು, ನಾವು ಕೊಂಡುದು ಪ್ರಸಾದ, ನಿಂದುದು ಓಗರವೆಂದು, ಮನಸಿಗೆ ಕೈಗೆ ಬಂದಂತೆ ತಿಂದು ತೇಗುವ ಪಾದೋದಕಪ್ರಸಾದದ್ರೋಹಿಗಳ ಮೋರೆಯ ಮೇಲೆ ಪಟಪಟನೆ ಹೊಡೆದು ಭವಘೋರಸಂಸಾರಸಾಗರಕ್ಕೆ ಹಾಕೆಂದವರು ನಮ್ಮ ಪೂರ್ವಪುರಾತನ ಗುರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.