ವಚನ - 1118     
 
ಕುಲದೊಳಗೆ ಹುಟ್ಟಿ ಕುಲವ ಬೆರಸದೆ ತಮ್ಮ ನಿಲವ ಬಲಿದಿಪ್ಪವರು ಇನ್ನಾರು ಹೇಳಾ ಬಸವಣ್ಣವಲ್ಲದೆ? ಹಬ್ಬಿದ ಮೂರು ಬೆಟ್ಟಕ್ಕೆ ತನ್ನ ಮನವ ಹಬ್ಬಲೀಯದೆ ಲಿಂಗ ಜಂಗಮಕ್ಕೆ ಸವೆಸಿ ಸ್ವಯಲಿಂಗವಪ್ಪರಿನ್ನಾರು ಹೇಳಾ ಬಸವಣ್ಣನಲ್ಲದೆ? ಸ್ವಯೋ ಲಿಂಗ ಸ್ವಯೋ ಶರಣ ಸ್ವಯೋ ಭೋಗವೆಂದುದಾಗಿ, ಗುಹೇಶ್ವರಾ, ನಿಮ್ಮ ಶರಣ ಸಂಗನಬಸವಣ್ಣಂಗೆ ನಮೋ ನಮೋ ಎಂಬೆನು.