Index   ವಚನ - 1    Search  
 
ವೈರಾಗ್ಯ ವೈರಾಗ್ಯವೆಂತೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ನೀವು ಕೇಳಿರೊ. ಆ ವೈರಾಗ್ಯದ ಭೇದವೆಂತೆಂದರೆ ಬಲ್ಲರೆ ಹೇಳಿ, ಅರಿಯದಿರ್ದಡೆ ಕೇಳಿ. ನಿಮ್ಮ ಅಂಗ ಕುಲ ಛಲ ಸೂತ್ರಕವೆಂಬ ಕಂಬವನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಹೊತ್ತು, ಕುಲಗುರುವೆಂಬ ಲಿಂಗದ ಪೂಜೆಯನೆ ಮಾಡಿ, ಕುಲನೀತಿಯೆಂಬ ಧರ್ಮಶಾಸ್ತ್ರವ ನೋಡಿಕೊಂಡು ಹಲವು ಜಾತಿಗಳೆಲ್ಲ ಅರಿದೆನೆಂದು, ತನ್ನ ದ್ವಾರವಟ್ಟಕ್ಕೆ ಬಂದು ನಿಂದರೆ, ತನ್ನ ಮನ ಒಲ್ಮೆಯಿಂದ ಅನ್ನವನು ನೀಡಿ, ಉಮ್ಮಾಯದಲ್ಲಿ ನಿಂದು ತನ್ನ ಮನ ವೈರಾಗ್ಯವಾದರೆ ವಾರ ತಿಥಿ ನಕ್ಷತ್ರ ಯೋಗ ಕರಣ ಇಂತಿವೈದನು ಪಂಚಾಂಗದಲ್ಲಿ ತಿಳಿದು ನೋಡಿ, ಬ್ರಹ್ಮ ಕಲ್ಯಾಣಿಯೊಳು ಪತ್ರವ ಕೊಂಡು ಇದ್ದು ನಾಳೆ ಸಂದುಹೋದೆನೆಂಬುವನು ಮುಂದಲಿತ್ತು ತನ್ನ ಕುಲಬಾಂಧವರಿಗೆ ಹೇಳಿ ಬಲಾತ್ತಾಗಿ ಹೋಗಬಲ್ಲರೆ ಆತನಿಗೆ 'ವೈರಾಗ್ಯದದೇವರೆಂದು' ಎನ್ನಬಹುದು ಕಾಣಿರೊ. ಇಂತೀ ವೈರಾಗ್ಯದ ಭೇದವನರಿಯದೆ ಕಾಕುಮನುಜರು ತಮ್ಮ ಕುಲಛಲವೆಂಬುವ ಕಂಬವ ಕೈಹಿಡಿದು ಕುಲದೈವ ಮನೆದೈವವೆಂಬ ಗುಡಿಯ ಹಳಿಯ ಕೆಡವಿಬಿಟ್ಟು ಕುಲಗುರುವೆಂಬ ಲಿಂಗಪೂಜೆಯನು ಬಿಟ್ಟು ಕುಲನೀತಿಯೆಂಬ ಧರ್ಮದ ಶಾಸ್ತ್ರದ ಪತ್ರವನು ಹರಿದುಬಿಟ್ಟು ಪಾಷಂಡಿಮತದ ರಾಶಿಯೊಳಗಾದ ಮನುಜರ ಕೈಯಲ್ಲಿ ದೀಕ್ಷೆಯನು ಮಾಡಿಕೊಂಡು, ಕಾವಿ ಅರಿವೆಯ ಹೊದ್ದುಕೊಂಡು, ದೇವರೊಳಗೆ ದೇವರಾದೆನೆಂದು ಭಕ್ತರ ಕೂಡೆ ಶರಣಂಗೊಟ್ಟು, ನಾನು ವೈರಾಗ್ಯದ ದೇವರೊಳಗೆ ದೇವರೆಂದು ಹೆಸರಿಟ್ಟುಕೊಂಡು, ನುಡಿವಾಚಾರರೂಪದ ಸೂಳೆಯರು ಏನಾಯಿತ್ತು ಎಂದರೆ, ಜ್ಞಾನಶ್ರವಣರ ವಾಹನಕ್ಕೆ ಹುಟ್ಟಿದಂಥ ಕುನ್ನಿ ತೊತ್ತಿನ ಮಕ್ಕಳಾಗಿರ್ದವೆಂದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.